ಬೆಂಗಳೂರು (ಆ. 20):  ರಾಜ್ಯದಲ್ಲಿ ಅವಾಂತರ ಸೃಷ್ಟಿಸಿದ ನೆರೆ ಪರಿಸ್ಥಿತಿಯು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆದಾಯಕ್ಕೂ ದೊಡ್ಡ ಹೊಡೆತ ನೀಡಿದೆ. ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ಸಾರಿಗೆ ನಿಗಮಗಳಿಗೆ ಬರೋಬ್ಬರಿ 35 ಕೋಟಿ ರು. ಆದಾಯ ಖೋತಾ ಆಗಿದೆ!

ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ವ್ಯಾಪ್ತಿಯ 17 ಜಿಲ್ಲೆಗಳಲ್ಲಿ ಉಂಟಾದ ಪ್ರವಾಹದಿಂದ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಸಾವಿರಾರು ಕೋಟಿ ರು. ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಇದೇ ರೀತಿ ಕೇವಲ 10 ದಿನಗಳ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 35 ಕೋಟಿ ರು. ಆದಾಯ ನಷ್ಟವಾಗಿದೆ. ಈ ಅನಿರೀಕ್ಷಿತ ಹೊಡೆತಕ್ಕೆ ಮೊದಲೇ ಸಂಕಷ್ಟದಲ್ಲಿದ್ದ ಸಾರಿಗೆ ನಿಗಮಗಳು ತತ್ತರಿಸಿವೆ.

ಆಗಸ್ಟ್‌ ಮೊದಲ ವಾರದಲ್ಲಿ ಉಂಟಾದ ಭಾರೀ ಮಳೆ ಹಾಗೂ ಭೀಕರ ಪ್ರವಾಹದಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಭೂ-ಕುಸಿತ, ಗುಡ್ಡ ಕುಸಿತವಾದರೆ, ಪ್ರವಾಹಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ರಸ್ತೆಗಳು ಜಲಾವೃತವಾಗಿದ್ದವು. ಈ ಹಿನ್ನೆಲೆಯಲ್ಲಿ ಪ್ರವಾಹದ ಅಬ್ಬರ ತಗ್ಗುವವರೆಗೂ ಹಲವು ಮಾರ್ಗಗಳಲ್ಲಿ ಬಸ್‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಇದರಿಂದ ವಾಯವ್ಯ ಸಾರಿಗೆ ನಿಗಮ(ಎನ್‌ಡಬ್ಲ್ಯೂಕೆಆರ್‌ಟಿಸಿ)ಕ್ಕೆ 21.50 ಕೋಟಿ ರು., ಕೆಎಸ್‌ಆರ್‌ಟಿಸಿಗೆ 12 ಕೋಟಿ ರು. ಹಾಗೂ ಈಶಾನ್ಯ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ಕ್ಕೆ 2 ಕೋಟಿ ರು. ಸೇರಿ ಬರೋಬ್ಬರಿ 35 ಕೋಟಿ ರು. ಆದಾಯ ಖೋತವಾಗಿದೆ. ಈ ಮೂರು ನಿಗಮಗಳ ಪೈಕಿ ವಾಯುವ್ಯ ಸಾರಿಗೆ ನಿಗಮಕ್ಕೆ ಅತಿ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮುಂಗಡ ಟಿಕೆಟ್‌ ಬುಕಿಂಗ್‌ ರದ್ದು:

ಪ್ರವಾಹದ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ನಡುವೆ ಸಂಚಾರ ಸ್ಥಗಿತಗೊಂಡಿದ್ದರಿಂದ ಸುಮಾರು 2 ಲಕ್ಷ ಪ್ರಯಾಣಿಕರು ಮುಂಗಡ ಟಿಕೆಟ್‌ ಬುಕಿಂಗ್‌ ರದ್ದುಗೊಳಿಸಿದ್ದರು. ಪ್ರವಾಹಪೀಡಿತ ಪ್ರದೇಶಗಳ ಹೊರತಾದ ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆ ಮುಂದುವರಿದರೂ ಮಳೆಯ ಅಬ್ಬರ ಹಾಗೂ ಪ್ರವಾಹದ ಭಯಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿದಿತ್ತು. ಈ ಎಲ್ಲ ಕಾರಣಗಳಿಂದ ನಿಗಮಗಳ ಆದಾಯ ಖೋತಾ ಆಗಿದೆ. ಇದು ನಷ್ಟದ ಸುಳಿಯಲ್ಲಿರುವ ಸಾರಿಗೆ ನಿಗಮಗಳಿಗೆ ನುಂಗಲಾರದ ತುತ್ತಾಗಿದೆ.

ಸರ್ಕಾರದಿಂದ ನೆರವಿಗೆ ಮೊರೆ

ಪ್ರವಾಹದ ಸಂದರ್ಭದಲ್ಲಿ ಮೂರು ರಸ್ತೆ ಸಾರಿಗೆ ನಿಗಮಗಳಿಗೂ ಆದಾಯ ನಷ್ಟವಾಗಿದೆ. ಇದೀಗ ರಾಜ್ಯ ಸರ್ಕಾರ ಪ್ರವಾಹಪೀಡಿತ ಪ್ರದೇಶಗಳತ್ತ ಹೆಚ್ಚು ಗಮನ ಹರಿಸಿದೆ. ಹಾಗಾಗಿ ಶೀಘ್ರದಲ್ಲೇ ನಾಲ್ಕು ಸಾರಿಗೆ ನಿಗಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸೂಕ್ತ ನೆರವಿಗೆ ಮನವಿ ಮಾಡಲಾಗುವುದು.

- ಶಿವಯೋಗಿ ಸಿ.ಕಳಸದ, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ

ಸಾಲು ರಜೆಗಳಿಗೂ ಪ್ರವಾಹದ ಎಫೆಕ್ಟ್:

ಸಾರಿಗೆ ನಿಗಮಗಳು ಕಾರ್ಯಾಚರಣೆ ಮಾಡುವ ಎಲ್ಲಾ ಮಾರ್ಗಗಳಲ್ಲೂ ಆದಾಯವಿರುವುದಿಲ್ಲ. ಆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್‌ ಸೇವೆ ನೀಡಲಾಗುತ್ತದೆ. ಸಾಲು ರಜೆಗಳ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ ಕಾರ್ಯಾಚರಣೆಯಿಂದ ಬರುವ ಆದಾಯದಿಂದ ಈ ನಷ್ಟಸರಿದೂಗಿಸಲಾಗುತ್ತದೆ.

ಈ ಬಾರಿ ವರಮಹಾಲಕ್ಷ್ಮೇ ಹಬ್ಬ, ಭಾನುವಾರ, ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಸಾಲು ರಜೆ ಸಿಕ್ಕರೂ ಪ್ರವಾಹದ ಹಿನ್ನೆಲೆಯಲ್ಲಿ ಸಾಮಾನ್ಯ ಬಸ್‌ಗಳ ಸಂಚಾರವನ್ನೇ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಪ್ರಶ್ನೆಯೇ ಉದ್ಭವಿಸಲಿಲ್ಲ. ಇದು ಸಾರಿಗೆ ನಿಗಮಗಳ ಆದಾಯಕ್ಕೆ ಭಾರೀ ಹೊಡೆತ ನೀಡಿದೆ ಎಂದರು.

ನಿಗಮ ಆದಾಯ ನಷ್ಟ(ಕೋಟಿ ರು.)

ಎನ್‌ಡಬ್ಲ್ಯೂಕೆಆರ್‌ಟಿಸಿ 21.50

ಕೆಎಸ್‌ಆರ್‌ಟಿಸಿ 12

ಎನ್‌ಇಕೆಆರ್‌ಟಿಸಿ 02

ಒಟ್ಟು 35.50

- ಮೋಹನ್ ಹಂಡ್ರಂಗಿ