Asianet Suvarna News Asianet Suvarna News

ರಂಗೇರಿದ ಬೈ ಎಲೆಕ್ಷನ್: ಹುಣಸೂರು ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಫೈನಲ್

ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್ ಪೇಟೆ, ಮಸ್ಕಿ, ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳಿಗೆ ವಿಧಾನಸಭೆ ಉಪ ಚುನಾವಣೆ ಸಂಬಂಧ ಇಂದು [ಶನಿವಾರ] ಕೆಪಿಸಿಸಿ ಕಚೇರಿಯಲ್ಲಿ  ನಡೆದಿದ್ದ ವಿಶೇಷ ಸಭೆ ಅಂತ್ಯವಾಗಿದ್ದು, ಮೈತ್ರಿ ಸರ್ಕಾರದ ವಿರುದ್ಧ ತೊಡೆತಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಎಚ್‌ ವಿಶ್ವನಾಥ್‌ ಅವರ ಕ್ಷೇತ್ರದ ಉಪಚುನಾವಣೆಗೆ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಫೈನಲ್ ಮಾಡಲಾಗಿದೆ. 

EX MLA manjunath Name final as congress candidate for hunsur by Election
Author
Bengaluru, First Published Sep 14, 2019, 7:24 PM IST

ಬೆಂಗಳೂರು, [ಸೆ.14]:  ಜೆಡಿಎಸ್ ಹಾಗು ಕಾಂಗ್ರೆಸ್ ಅನರ್ಹಗೊಂಡ ಶಾಸಕರುಗಳ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ದಿನಾಂಕ ಘೋಷಣೆ ಮುಂಚೆಯೇ ಬೈ ಎಲೆಕ್ಷನ್ ಕಾವು ರಂಗೇರಿದೆ.  

ಇದಕ್ಕೆ ಪೂರಕವೆಂಬಂತೆ ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್ ಪೇಟೆ, ಮಸ್ಕಿ, ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳ ಉಪಚುನಾವಣೆ  ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಂಬಂಧ ಇಂದು [ಶನಿವಾರ] ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸಭೆ ಮಾಡಿದ್ದಾರೆ.

20 ಶಾಸಕರು ಜೆಡಿಎಸ್‌ಗೆ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಸಭೆ ಸೇರಿ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮೊದಲ ಸುತ್ತಿನ ಚರ್ಚೆ ನಡೆಸಿದರು.

ಹುಣಸೂರಿಗೆ ಮಂಜುನಾಥನೇ ಫೈನಲ್
ಸಭೆಯಲ್ಲಿ ಮೈಸೂರಿನ ಹುಣಸೂರು ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಂಜುನಾಥ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. 

ಎರಡು ಬಾರಿ ಶಾಸಕರಾಗಿದ್ದ ಮಂಜುನಾಥ್, 2018ರಲ್ಲಿ ಎಚ್.ವಿಶ್ವನಾಥ್ ಎದುರು ಸೋಲನ್ನನುಭವಿಸಿದ್ದರು. ಇದೀಗ ಉಪಚುನಾವಣೆಯಲ್ಲಿ ಮಂಜುನಾಥ್​ಗೆ ಟಿಕೆಟ್ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಿದ್ದು, ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಸಭೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇವೆ. ಜೆಡಿಎಸ್​ ಪಕ್ಷದೊಂದಿಗೆ ಮೈತ್ರಿ ಇಲ್ಲ. ಮುಂದೆ ಎಂಥ ಪರಿಸ್ಥಿತಿ ನಿರ್ಮಾಣ ಆಗುತ್ತೋ ಗೊತ್ತಿಲ್ಲ. ಹೈ ಕಮಾಂಡ್​ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದರು.

 ಉಪಚುನಾವಣೆ ಹಿನ್ನೆಲೆ 8 ಕ್ಷೇತ್ರಗಳ ಸಭೆ ಮಾಡಿದ್ದೇವೆ. ವೀಕ್ಷಕರು ಆ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಬಂದಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ನಮಗೆ ಉತ್ತಮ ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಚುನಾವಣೆಗೆ ನಾವು ಸಂಪೂರ್ಣ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಹೊಸಕೋಟೆಯಲ್ಲಿ 21ರಂದು ಸಮಾವೇಶ ಮಾಡ್ತೀವಿ. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನತೆಗೆ ಮುಟ್ಟಿಸುತ್ತ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

Follow Us:
Download App:
  • android
  • ios