ನಾಟಿಂಗ್‌ಹ್ಯಾಂ: ಮಂಗಳವಾರ ನಡೆದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 444 ರನ್‌ ಪೇರಿಸಿದ ಆತಿಥೇಯ ಇಂಗ್ಲೆಂಡ್‌, ಆ ಮೂಲಕ ಒಂದು ದಿನದ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್‌ ಮಾಡಿದ ತಂಡವೆನಿಸಿ ಚರಿತ್ರೆ ಬರೆಯಿತು. ನಿರೀಕ್ಷೆಯಂತೆ ಪಾಕಿಸ್ತಾನ ಹೆಚ್ಚೇನೂ ಪ್ರತಿರೋಧ ಒಡ್ಡದೇ 275 ರನ್'ಗೆ ಆಲೌಟ್ ಆಗಿ 169 ರನ್'ಗಳ ಬೃಹತ್ ಮೊತ್ತದ ಅಂತರದಿಂದ ಸೋಲಪ್ಪಿತು.

ನಾಟಿಂಗ್‌ಹ್ಯಾಂ: ಚುಟುಕು ಕ್ರಿಕೆಟ್‌ನ ಮನೋಧರ್ಮಕ್ಕೆ ಒಗ್ಗಿ ಹೋದಂತಿರುವ ಈ ಕಾಲಘಟ್ಟದ ಕ್ರಿಕೆಟಿಗರಿಂದ ಇಂಥದ್ದೊಂದು ಸಾಧನೆ ಏನೂ ಅಸಾಮಾನ್ಯವೇನಲ್ಲ ಎಂಬುದನ್ನು ಇಂಗ್ಲೆಂಡ್‌ ಕ್ರಿಕೆಟಿಗರು ನಿರೂಪಿಸಿದ್ದಾರೆ.

ಮಂಗಳವಾರ ನಡೆದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 444 ರನ್‌ ಪೇರಿಸಿದ ಆತಿಥೇಯ ಇಂಗ್ಲೆಂಡ್‌, ಆ ಮೂಲಕ ಒಂದು ದಿನದ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್‌ ಮಾಡಿದ ತಂಡವೆನಿಸಿ ಚರಿತ್ರೆ ಬರೆಯಿತು. ನಿರೀಕ್ಷೆಯಂತೆ ಪಾಕಿಸ್ತಾನ ಹೆಚ್ಚೇನೂ ಪ್ರತಿರೋಧ ಒಡ್ಡದೇ 275 ರನ್'ಗೆ ಆಲೌಟ್ ಆಗಿ 169 ರನ್'ಗಳ ಬೃಹತ್ ಮೊತ್ತದ ಅಂತರದಿಂದ ಸೋಲಪ್ಪಿತು.

ಇಲ್ಲಿನ ಟ್ರೆಂಟ್‌ಬ್ರಿಜ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಪರ ಆರಂಭಿಕ ಅಲೆಕ್ಸ್‌ ಹೇಲ್ಸ್‌ (171: 122 ಎಸೆತ, 22 ಬೌಂಡರಿ, 4 ಸಿಕ್ಸರ್‌) ಗಳಿಸಿದ ಜೀವಮಾನ ಶ್ರೇಷ್ಠ ಸ್ಕೋರ್‌ ಅಲ್ಲದೆ, ಜೋ ರೂಟ್‌ (85: 86 ಎಸೆತ, 8 ಬೌಂಡರಿ) ಗಳಿಸಿದ ಅರ್ಧಶತಕ ಈ ರನ್‌ ಪ್ರವಾಹಕ್ಕೆ ವೇದಿಕೆಯಾಯಿತು. ಎರಡನೇ ವಿಕೆಟ್‌ಗೆ ಈ ಜೋಡಿ ಕಲೆಹಾಕಿದ 248 ರನ್‌ಗಳಲ್ಲದೆ, ನಾಲ್ಕನೇ ವಿಕೆಟ್‌ಗೆ ನಾಯಕ ಇಯಾನ್‌ ಮಾರ್ಗನ್‌ (57: 27 ಎಸೆತ, 3 ಬೌಂಡರಿ, 5 ಸಿಕ್ಸರ್‌) ಮತ್ತು ಜೋಸ್‌ ಬಟ್ಲರ್‌ (90: 51 ಎಸೆತ, 7 ಬೌಂಡರಿ, 7 ಸಿಕ್ಸರ್‌) ಕಲೆಹಾಕಿದ ಮುರಿಯದ 161 ರನ್‌ ಈ ವಿಶ್ವದಾಖಲೆಯ ಸ್ಕೋರ್‌ಗೆ ಶಿಖರಪ್ರಾಯವಾಯಿತು.

ಪಾಕ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ದಂಡಿಸಿದ ಈ ತ್ರಿಮೂರ್ತಿಗಳು ದ.ಆಫ್ರಿಕಾ ಕಲೆಹಾಕಿದ್ದ ಮೊತ್ತದ ದಾಖಲೆಯನ್ನು ಹಿಂದಿಕ್ಕಿದರು. ಪಾಕಿಸ್ತಾನ ಪರ ವಹಾಬ್‌ ರಿಯಾಜ್‌ 10 ಓವರ್‌ಗಳಲ್ಲಿ 110 ರನ್‌ ನೀಡಿ ಯಾವುದೇ ವಿಕೆಟ್‌ ಪಡೆಯದೆ ದುಬಾರಿ ಎನಿಸಿದರು. ಇನ್ನುಳಿದಂತೆ ಹಸನ್‌ ಅಲಿ 74ಕ್ಕೆ 2 ಮತ್ತು ಮೊಹಮದ್‌ ಹಫೀಜ್‌ 62ಕ್ಕೆ 1 ವಿಕೆಟ್‌ ಗಳಿಸಿದರು.

ಗೆಲ್ಲಲು 445 ರನ್'ಗಳ ಬೃಹತ್ ಗುರಿಯನ್ನು ಬೆಂಬತ್ತಿದ ಪಾಕಿಸ್ತಾನ ಯಾವ ಹಂತದಲ್ಲೂ ಗೆಲುವಿನ ಸೂಚನೆ ನೀಡಲಿಲ್ಲ. ಆರಂಭಿಕ ಆಟಗಾರ ಶಾರ್ಜೀಲ್ ಖಾನ್ ಮತ್ತು ಬಾಲಂಗೋಚಿ ಮೊಹಮ್ಮದ್ ಅಮೀರ್ 58 ರನ್ ಗಳಿಸಿದ್ದೇ ಗರಿಷ್ಠ ವೈಯಕ್ತಿಕ ಸ್ಕೋರಾಯಿತು.

ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್‌ 50 ಓವರ್‌ 3 ವಿಕೆಟ್‌ಗೆ 444 ರನ್
(ಅಲೆಕ್ಸ್‌ ಹೇಲ್ಸ್‌ 171, ಜೋ ರೂಟ್‌ 85, ಜೋಸ್‌ ಬಟ್ಲರ್‌ 90* ಇಯಾನ್‌ ಮಾರ್ಗನ್‌ 57*; ವಹಾಬ್‌ ರಿಯಾಜ್‌ 110ಕ್ಕೆ 0)

ಪಾಕಿಸ್ತಾನ 42.4 ಓವರ್ 275 ರನ್ ಆಲೌಟ್
(ಶಾರ್ಜೀಲ್ ಖಾನ್ 58, ಮೊಹಮ್ಮದ್ ಅಮೀರ್ 58, ಸರ್ಫರಾಜ್ ಅಹ್ಮದ್ 38, ಮೊಹಮ್ಮದ್ ನವಾಜ್ 34, ಯಾಸಿರ್ ಶಾ 26 ರನ್ - ಕ್ರಿಸ್ ವೋಕ್ಸ್ 41/4, ಅದಿಲ್ ರಷೀದ್ 73/2)

ವಿಶ್ವ ದಾಖಲೆಯ ತ್ರಿಮೂರ್ತಿಗಳು
ಅಲೆಕ್ಸ್‌ ಹೇಲ್ಸ್‌ 171 ರನ್‌, 122 ಎಸೆತ
ಜೋ ರೂಟ್‌ 85 ರನ್‌, 86 ಎಸೆತ
ಜೋಸ್‌ ಬಟ್ಲರ್‌ ಅಜೇಯ 90 ರನ್‌, 51 ಎಸೆತ
ಇಯಾನ್‌ ಮಾರ್ಗನ್‌ ಅಜೇಯ57 ರನ್‌, 27 ಎಸೆತ

ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಟಾಪ್‌ ಫೈವ್‌ ತಂಡಗಳು
ಇಂಗ್ಲೆಂಡ್‌ 444/3 (2016ರಲ್ಲಿ)
ಶ್ರೀಲಂಕಾ 443/9 (2006ರಲ್ಲಿ)
ದ.ಆಫ್ರಿಕಾ 439/2 (2015ರಲ್ಲಿ)
ದ.ಆಫ್ರಿಕಾ 438/9 49.5 (2006ರಲ್ಲಿ)
ದ.ಆಫ್ರಿಕಾ 438/4 (2015ರಲ್ಲಿ)