ವಡೋದರಾ(ಸೆ.28): ‘ಹೆಂಡ ಹಂಚದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ..’ಇದು ಕರ್ನಾಟಕದ ಅಥವಾ ದೇಶದ ಇನ್ಯಾವುದೋ ರಾಜ್ಯದ ಸಂಸದ ಹೇಳಿದ ಮಾತಲ್ಲ. ಬದಲಿಗೆ ಮದ್ಯವೇ ಸಿಗದ ಗುಜರಾತ್ ರಾಜ್ಯದ ಸಂಸದರೊಬ್ಬರು ನೀಡಿದ ಹೇಳಿಕೆ ಇದು.

ಹೌದು, ಮದ್ಯ ಹಂಚದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಗುಜರಾತ್ ನ ಪಂಚಮಹಲ್ ಸಂಸದ ಪ್ರಭಾತ್ ಸಿಂಗ್ ಚೌಹಾಣ್ ಹೇಳಿದ್ದಾರೆ. 2009 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮ ಇದೇ ಕಾರಣ ಎಂದು ಚೌಹಾಣ್ ಹೇಳಿದ್ದಾರೆ.

2009 ರಲ್ಲಿ ತಾನು ಕಾಂಗ್ರೆಸ್ ನ ಶಂಕರ್ ಸಿಂಗ್ ವಘೇಲಾ ವಿರುದ್ಧ ಚುನಾವಣೆಯಲ್ಲಿ ಗೆಲ್ಲಲು ಮದ್ಯ ಹಂಚಿದ್ದೇ ಕಾರಣ ಎಂದು ಹೇಳುವ ಮೂಲಕ ಚೌಹಾಣ್ ಬಿಜೆಪಿಗೆ ಮುಜುಗರ ತಂದಿತ್ತಿದ್ದಾರೆ.

ಈ ಬಾರಿಯೂ ಪಂಚಮಹಲ್ ಕ್ಷೇತ್ರದಿಂದ ತಮಗೆ ಟಿಕೆಟ್ ಪಕ್ಕಾ ಆಗಿದ್ದು, ಈ ಬಾರಿಯೂ ತಾವೇ ಚುನಾವಣೆಯಲ್ಲಿ ಗೆಲ್ಲುವುದು ಎಂದು ಚೌಹಾಣ್ ಭರವಸೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮದ್ಯ ನಿಷೇಧ ಇರುವ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಸಂಸದ ಅದ್ಹೇಗೆ ಮದ್ಯ ಹಂಚಿದ್ದರು ಎಂಬುದೇ ಎಲ್ಲರೂ ಕೇಳುತ್ತಿರುವ ಪ್ರಶ್ನೆಯಾಗಿದೆ.