ನವದೆಹಲಿ(ಮಾ.10): ಪುಲ್ವಾಮಾ ದಾಳಿ ಬಳಿಕ ರಾಜಕೀಯ ಪಕ್ಷಗಳು ತಮ್ಮ ಸಾರ್ವಜನಿಕ ಸಭೆಗಳಲ್ಲಿ ಸಶಸ್ತ್ರ ಪಡೆಗಳ ಕುರಿತು ಉಲ್ಲೇಖಿಸುತ್ತಿರುವುದು ಹೆಚ್ಚಾಗಿದ್ದು, ಚುನಾವಣಾ ಭಾಷಣಗಳಲ್ಲಿ ಸಶಸ್ತ್ರ ಪಡೆಗಳ ಕುರಿತು ಮಾತನಾಡದಂತೆ ಕೇಂದ್ರ ಚುನಾವಣಾ ಆಯೋಗ ತಾಕೀತು ಮಾಡಿದೆ.

ಚುನಾವಣಾ ಪ್ರಚಾರಕ್ಕೆ ಸೇನೆ ಹಾಗೂ ಸೈನಿಕರ  ಚಿತ್ರಗಳನ್ನು ರಾಜಕೀಯ ಪಕ್ಷಗಳು, ಮುಖಂಡರು ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಇಂದು  ಮಹತ್ವದ ಆದೇಶ ಹೊರಡಿಸಿದೆ.

ಭದ್ರತಾ ಪಡೆಗಳು  ರಾಜಕೀಯ ವ್ಯವಸ್ಥೆ, ಭದ್ರತೆಯ ರಕ್ಷಕರಾಗಿದ್ದು, ಆಧುನಿಕ ಪ್ರಜಾಪ್ರಭುತ್ವದಲ್ಲಿ ತಟಸ್ಥ ಪಾಲುದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಯಾವುದೇ ಕಾರಣಕ್ಕೂ ಪ್ರಚಾರದ ಸಂದರ್ಭದಲ್ಲಿ ಸೇನೆಯ ಹಾಗೂ ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಭಾಷಣಗಳಲ್ಲಿ ಸಶಸ್ತ್ರ ಪಡೆಗಳ ಕುರಿತು ಉಲ್ಲೇಖ ಮಾಡುತ್ತಿದ್ದು, ಇದನ್ನು ತಡೆಯುವಂತೆ ಕೋರಿ ನೌಕಾಸೇನೆ ಮಾಜಿ ಮುಖ್ಯಸ್ಥ ಎಲ್. ರಾಮದಾಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.