ಶ್ರವಣದೋಷವುಳ್ಳ ಪದವಿ ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆಗಳ ಮೇಲೆ ಹಸಿರು ಬಣ್ಣದ ಸ್ಟಿಕ್ಕರ್ ಅಂಟಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಬೆಂಗಳೂರು (ಡಿ.22): ಶ್ರವಣದೋಷವುಳ್ಳ ಪದವಿ ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆಗಳ ಮೇಲೆ ಹಸಿರು ಬಣ್ಣದ ಸ್ಟಿಕ್ಕರ್ ಅಂಟಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಗುರುವಾರ ನಡೆಸಿದ 19ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಭಾಷಾ ಸಮಸ್ಯೆ ಎದುರಿಸಲಿದ್ದಾರೆ. ವ್ಯಾಕರಣ, ವಾಕ್ಯ ರಚನೆ ದೋಷಗಳು ಸೇರಿದಂತೆ ವಿವಿಧ ಲೋಪದೋಷಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮೌಲ್ಯಮಾಪಕರು ಇಂತಹ ಉತ್ತರ ಪತ್ರಿಕೆಗಳನ್ನು ಬಹಳ ತಾಳ್ಮೆಯಿಂದ ನೋಡುವಂತೆ ತಿಳಿಸುವ ಸೂಚನೆಗಾಗಿ ಸ್ಟಿಕ್ಕರ್ ಅಂಟಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆಯು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪದವಿ ಪರೀಕ್ಷೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸುವಂತೆ ಹಾಗೂ ಪರೀಕ್ಷಾ ನಿಯಮಗಳನ್ನು ಮಾರ್ಪಾಡು ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬದಲಾವಣೆಗೆ ವಿವಿಗಳು ಒಪ್ಪಿಗೆ ನೀಡಿವೆ.

ಕೈಗೊಂಡ ನಿರ್ಣಯಗಳು:

ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಒಂದು ಗಂಟೆ ಮೊದಲು ಪ್ರಾಂಶುಪಾಲರಿಗೆ ವರದಿ ಮಾಡಿಕೊಳ್ಳಬೇಕು. ಮೂರು ಗಂಟೆ ಅವಧಿಯ ಪ್ರಶ್ನೆ ಪತ್ರಿಕೆಗೆ ಗಂಟೆಗೆ 20 ನಿಮಿಷಗಳಂತೆ ಒಂದು ಗಂಟೆಗೂ ಹೆಚ್ಚಿನ ಕಾಲಾವಕಾಶ ನೀಡಬೇಕು. ಪರೀಕ್ಷೆ ಬರೆಯಲು ಸಹಾಯ ಮಾಡುವ ವಿದ್ಯಾರ್ಥಿಗಳು ವಿಶೇಷ ಚೇತನ ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಹತೆ ಇರಬೇಕೆಂದಿಲ್ಲ. ಆದರೆ, ಬರಹಗಾರ ಮತ್ತು ವಿಶೇಷ ಚೇತನ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಪರೀಕ್ಷೆಯಲ್ಲಿನ ವಿಷಯಗಳು ಒಂದೇ ಆಗಿರಬಾರದು. ತಾಳ್ಮೆಯಿಂದ ಮೌಲ್ಯಮಾಪನಕ್ಕಾಗಿ ಉತ್ತರ ಪತ್ರಿಕೆ ಮೇಲೆ ಹಸಿರು ಸ್ಟಿಕ್ಕರ್ ಹಾಕಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.