ಇನ್ನೇನು ಸಮೀಪಿಸುತ್ತಿರುವ ಲೋಕಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯನ್ನು ಕೈಗೊಳ್ಳಲಾಗುತ್ತಿದೆ.
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪಿಸುತ್ತರುವ ನಡುವೆ, ವಿವಿಪ್ಯಾಟ್ (ಮತ ತಾಳೆಯಂತ್ರ)ಗಳಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಚುನಾವಣಾ ಆಯೋಗ ಮಾಡಿದೆ.
ವಿವಿಪ್ಯಾಟ್‌ನಲ್ಲಿನ ಪೇಪರ್ ರೋಲ್‌ಗಳು ತೇವಾಂಶದ ಸಂದರ್ಭಗಳಲ್ಲಿ ಒದ್ದೆಯಾಗದಂತ ವ್ಯವಸ್ಥೆ ಸೇರಿದಂತೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ವಿವಿಪ್ಯಾಟ್‌ಗಳಲ್ಲೂ ಕಾಣಿಸಿಕೊಂಡಿದ್ದ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸಲಾಗಿದೆ. ವಿವಿಪ್ಯಾಟ್‌ನ ಕಾಂಟ್ರಾಸ್ಟ್ ಸೆನ್ಸರ್ ಮೇಲೆ ನೇರವಾಗಿ ಬೆಳಕು ಬೀಳುತ್ತಿದ್ದರಿಂದ, ಯಂತ್ರದಲ್ಲಿ ದೋಷಗಳು ಕಾಣಿಸಿಕೊಳ್ಳುತಿತ್ತು. ಅದನ್ನು ಈಗ ನಿವಾರಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ.
ಇವಿಎಂಗಳು ಎಲೆಕ್ಟ್ರಾನಿಕ್ ಉಪಕರಣಗಳಾಗಿರುವುದರಿಂದ ಅವುಗಳಲ್ಲಿ ಸಮಸ್ಯೆಯಿರುವುದಿಲ್ಲ, ಆದರೆ ವಿವಿಪ್ಯಾಟ್‌ಗಳು ಎಲೆಕ್ಟ್ರೊ-ಮೆಕ್ಯಾನಿಕಲ್ ಭಾಗಗಳನ್ನು ಹೊಂದುವುದರಿಂದ ಅದು ಅದರ ಕಾರ್ಯನಿರ್ವಹಣೆಗೆ ಧಕ್ಕೆಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
