ನವದೆಹಲಿ[ಮಾ.30]: ಶತ್ರು ಉಪಗ್ರಹ ಹೊಡೆದುರುಳಿಸುವ ಕ್ಷಿಪಣಿಯ ಯಶಸ್ವಿ ಪ್ರಯೋಗದ ಬಗ್ಗೆ ಇತ್ತೀಚೆಗೆ ಟೀವಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್‌ಚಿಟ್‌ ನೀಡಿದೆ ಎಂದು ಮೂಲಗಳು ಹೇಳಿವೆ.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ‘ಮಿಷನ್‌ ಶಕ್ತಿ’ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾದ ಬಗ್ಗೆ ಟೀವಿಯಲ್ಲಿ ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತಿ ಉಲ್ಲಂಘಿಸಿದ್ದಾರೆ’ ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರಿದ್ದವು. ಆದರೆ ಮೋದಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ ಎಂದು ಮೂಲಗಳು ಹೇಳಿವೆ.

‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಸಹ ತಮ್ಮ ಪಕ್ಷದ ಪರ ಅಥವಾ ಹೆಸರು ಅಥವಾ ಮತದಾರರಿಗೆ ತಮ್ಮ ಪರ ಮತ ಚಲಾಯಿಸುವಂತೆ ಕೋರಿಕೊಂಡಿಲ್ಲ. ಈ ಹಿಂದೆ ದೇಶದ ಭದ್ರತೆ ಮತ್ತು ವಿಪತ್ತು ನಿರ್ವಹಣೆಯಂಥ ವಿಚಾರಗಳು ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಮೋದಿ ಅವರು ಉಪಗ್ರಹ ಛೇದಕ ಕ್ಷಿಪಣಿಯ ಬಗ್ಗೆ ಮಾಡಿದ ಘೋಷಣೆ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಚುನಾವಣಾ ಆಯೋಗ ಹೇಳಿದೆಯೆಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ಹೇಳಿದೆ.