ಬಕಿಂಗ್‌ಹ್ಯಾಮ್(ಜೂ.04): ಇಂಗ್ಲೆಂಡ್ ಮಹಾರಾಣಿ ಕ್ವೀನ್ ಎಲಿಜಬೆತ್ ಅಂದರೆ ಸುಮ್ಮನೆ ಮಾತಲ್ಲ. ವಿಶ್ವದ ಪ್ರಬಲ ರಾಜಮನೆತನದ ಮಹಾರಾಣಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಕ್ವೀನ್ ಎಲಿಜಬೆತ್, ಜಗತ್ತಿಗೆ ನಾಗರಿಕತೆ(?) ಕಲಿಸಿದ ರಾಜವಂಶದ ಪ್ರತಿನಿಧಿ.

ಕ್ವೀನ್ ಎಲಿಜಬೆತ್ ಅವರನ್ನು ಭೇಟಿಯಾಗುವುದು ಎಂದರೆ ಅದಕ್ಕೊಂದು ನೀತಿ ಸಂಹಿತೆ ಇದೆ. ಮಹಾರಾಣಿಯನ್ನು ಮಾತನಾಡಿಸಲು ಕೆಲವೊಂದು ರೀತಿ ನೀತಿಗಳಿವೆ. ಇದನ್ನು ಮೀರಿದರೆ ಎಲ್ಲರಿಂದ ಬೈಯಿಸಿಕೊಳ್ಳುವುದು ಗ್ಯಾರಂಟೀ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ರಾಯಲ್ ಪ್ರೊಟೋಕಾಲ್ ಮುರಿದು ಎಲ್ಲರಿಂದ ಬೈಯಿಸಿಕೊಂಡಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಟ್ರಂಪ್ ಮಹಾರಾಣಿ ಅವರ ಬೆನ್ನು ತಟ್ಟಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಬಕಿಂಗ್‌ಹ್ಯಾಮ್  ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಟ್ರಂಪ್, ಕ್ವೀನ್ ಎಲಿಜಬೆತ್ ಅವರನ್ನು ಹೊಗಳಿ ಭಾಷಣ ಮಾಡಿದರು. ಎರಡನೇ ವಿಶ್ವ ಯುದ್ಧದಲ್ಲಿ ಇಂಗ್ಲೆಂಡ್-ಅಮೆರಿಕ ನಡುವಿನ ಸಂಬಂಧ ಸುಧಾರಣೆಗೆ ಮಹಾರಾಣಿ ಒತ್ತು ನೀಡಿದ್ದರು ಎಂದು ಟ್ರಂಪ್ ಹೊಗಳಿಕೆಯ ಮಾತುಗಳನ್ನಾಡಿದರು.

ಆದರೆ ಭಾಷಣ ಮುಗಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಫೋಟೋಗೆ ಪೋಸ್ ಕೊಟ್ಟ ಟ್ರಂಪ್, ಈ ವೇಳೆ ಮಹಾರಾಣಿ ಕ್ವೀನ್ ಎಲಿಜಬೆತ್ ಅವರ ಬೆನ್ನು ಮುಟ್ಟಿದ್ದಾರೆ.

ಟ್ರಂಪ್ ಅವರ ಈ ನಡೆಗೆ ಇದೀಗ ವಿರೋಧ ವ್ಯಕ್ತವಾಗಿದ್ದು, ಮಹಾರಾಣಿ ಅವರ ಮೈ ಮುಟ್ಟುವ ಮೂಲಕ ಟ್ರಂಪ್ ರಾಜಮನೆತನದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೇ ಟ್ರಂಪ್ ಇಂಗ್ಲೆಂಡ್ ಮಹಾರಾಣಿ ಅವರಿಗೆ ನೀಡಬೇಕಿದ್ದ ಉಡುಗೊರೆಯನ್ನು ನೀಡಲು ಮರೆತಿದ್ದು, ಟ್ರಂಪ್ ಪತ್ನಿ ಮಲೇನಿಯಾ ಟ್ರಂಪ್ ನೆರವಿಗೆ ಧಾವಿಸಿ ಮಹಾರಾಣಿ ಅವರಿಗೆ ಉಡುಗೊರೆ ನೀಡಿದ್ದಾರೆ.