ಭಾರತದಲ್ಲಿ ಉಪಗ್ರಹ ಇಂಟರ್‌ನೆಟ್ ಸೇವೆ ಒದಗಿಸಲು ರಿಲಯನ್ಸ್ ಮತ್ತು ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿಯಮಗಳನ್ನು ಪಾಲಿಸಿದರೆ ಸ್ಪರ್ಧೆ ಸ್ವಾಗತಾರ್ಹ ಎಂದು ರಿಲಯನ್ಸ್ ಹೇಳಿದ್ದರೆ, ಸೇವೆ ನೀಡಲು ತಾನು ಸಿದ್ಧ ಎಂದು ಸ್ಟಾರ್‌ಲಿಂಕ್ ತಿಳಿಸಿದೆ. ಭದ್ರತಾ ಮಾನದಂಡಗಳನ್ನು ಪೂರೈಸಿದ ಬಳಿಕವಷ್ಟೇ ತರಂಗಾಂತರ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ಭಾರತದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ (ಸ್ಯಾಟಲೈಟ್ ಇಂಟರ್ನೆಟ್) ಸೇವೆಗಳನ್ನು ಒದಗಿಸುವ ವಿಷಯದಲ್ಲಿ ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಒಡೆತನದ 'ಸ್ಟಾರ್‌ಲಿಂಕ್' ಮತ್ತು ಮುಕೇಶ್ ಅಂಬಾನಿ ನೇತೃತ್ವದ 'ರಿಲಯನ್ಸ್ ಇಂಡಸ್ಟ್ರೀಸ್' ನಡುವೆ ಚರ್ಚೆಗಳು ನಡೆಯುತ್ತಿವೆ. ಭಾರತದ ಕಾನೂನುಗಳು ಹಾಗೂ ಭದ್ರತಾ ನೀತಿಗಳನ್ನು ಪ್ರತಿಯೊಂದು ಕಂಪನಿಯು ಕಡ್ಡಾಯವಾಗಿ ಪಾಲಿಸಿದರೆ, ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಮುಕ್ತ ಸ್ಪರ್ಧೆಯನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ ಎಂಬ ರಿಲಯನ್ಸ್ ನೀಡಿದ್ದ ಹೇಳಿಕೆಗೆ ಸ್ಟಾರ್‌ಲಿಂಕ್ ಇದೀಗ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ತಾನು ಭಾರತದಲ್ಲಿ ಸೇವೆ ಆರಂಭಿಸಲು ಸಂಪೂರ್ಣವಾಗಿ ಸಜ್ಜಾಗಿರುವುದಾಗಿ ಸಂಸ್ಥೆ ತಿಳಿಸಿದೆ.

ಸ್ಟಾರ್‌ಲಿಂಕ್ ನೀಡಿರುವ ಅಧಿಕೃತ ಸ್ಪಷ್ಟನೆ

ತನ್ನ ಅಧಿಕೃತ 'X' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ಟಾರ್‌ಲಿಂಕ್ ಸಂಸ್ಥೆಯು, ನಾವು ಕಳೆದ ಐದಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ನಿಯಂತ್ರಕರು, ಉದ್ಯಮ ಕ್ಷೇತ್ರದ ಗಣ್ಯರು ಮತ್ತು ಸಂಪರ್ಕ ನಿರ್ವಾಹಕರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ. ಭಾರತೀಯ ಇಂಟರ್ನೆಟ್ ಸಂಚಾರವನ್ನು ಅತ್ಯಂತ ಸುರಕ್ಷಿತವಾಗಿ ಪೂರೈಸಲು ಅಗತ್ಯವಿರುವ ಮೀಸಲಾದ ವ್ಯವಸ್ಥೆಗಳು, ಗೇಟ್‌ವೇಗಳು ಹಾಗೂ ತಾಂತ್ರಿಕ ಮೂಲಸೌಕರ್ಯಗಳ ಜಾಲವನ್ನು ದೇಶಾದ್ಯಂತ ಈಗಾಗಲೇ ನಿರ್ಮಿಸಿದ್ದೇವೆ. ಈ ಎಲ್ಲಾ ಮೂಲಸೌಕರ್ಯಗಳು ಸರ್ಕಾರದ ಅಗತ್ಯ ಅನುಮೋದನೆಗಳೊಂದಿಗೆ ಸಿದ್ಧಗೊಂಡಿವೆ. ಭಾರತದ ಮೂಲೆ ಮೂಲೆಗೂ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಸ್ಟಾರ್‌ಲಿಂಕ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದೆ.

ಮಸ್ಕ್ ಆರೋಪ ಮತ್ತು ರಿಲಯನ್ಸ್ ತಿರುಗೇಟು

ಕೆಲವು ಉದ್ಯಮ ಸಮೂಹಗಳು ಮತ್ತು ಭಾರಿ ಪ್ರಭಾವಿ ಉದ್ಯಮಿಗಳು ಸ್ಟಾರ್‌ಲಿಂಕ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ಎಲಾನ್ ಮಸ್ಕ್ ಇತ್ತೀಚೆಗೆ ಆರೋಪಿಸಿದ್ದರು. ಸರಣಿ ಪೋಸ್ಟ್‌ಗಳಲ್ಲಿ ಮುಕೇಶ್ ಅಂಬಾನಿ ಅವರ ಹೆಸರನ್ನು ಉಲ್ಲೇಖಿಸುವ ಮುನ್ನ ಮಸ್ಕ್ ಈ ವಾದ ಮುಂದಿಟ್ಟಿದ್ದರು.

ಆದರೆ, ಮಸ್ಕ್ ಅವರ ಈ ಆರೋಪಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ತಿರಸ್ಕರಿಸಿದೆ. ಈ ಬಗ್ಗೆ ರಿಲಯನ್ಸ್ ವಕ್ತಾರರು , ಭಾರತೀಯ ಮಾರುಕಟ್ಟೆ ಮತ್ತು ರಿಲಯನ್ಸ್ ಕುರಿತು ವ್ಯಕ್ತವಾಗಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಸತ್ಯಾಂಶಗಳನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ. ಭಾರತೀಯ ಉದ್ಯಮ ರಂಗದ ಭಾಗವಾಗಿ ಬೆಳೆದಿರುವ ರಿಲಯನ್ಸ್, ಜನರ ಜೀವನಮಟ್ಟವನ್ನು ಸುಧಾರಿಸುವ ದೇಶೀಯ ಹಾಗೂ ಅಂತರರಾಷ್ಟ್ರೀಯ ಹೂಡಿಕೆಗಳನ್ನು ಯಾವಾಗಲೂ ಸ್ವಾಗತಿಸುತ್ತದೆ. ಆದರೆ, ಈ ಮುಕ್ತತೆಯು ದೇಶದ ಕಾನೂನಿನ ಚೌಕಟ್ಟಿಗೆ ಒಳಪಟ್ಟಿರಬೇಕು. ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವಂತೆ, ದೇಶೀಯ ಅಥವಾ ವಿದೇಶಿ ಸಂಸ್ಥೆಯಾಗಿರಲಿ ಪ್ರತಿಯೊಬ್ಬ ಅರ್ಜಿದಾರರಿಗೂ ಒಂದೇ ರೀತಿಯ ನಿಯಮಗಳು ಮತ್ತು ಪ್ರಕ್ರಿಯೆಗಳು ಅನ್ವಯವಾಗುತ್ತವೆ. ರಿಲಯನ್ಸ್ ಜಿಯೋದ ಸ್ವಂತ ಉಪಗ್ರಹ ಸೇವೆಗಳು ಕೂಡ ಪ್ರಸ್ತುತ ಸರ್ಕಾರದ ಅಂತಿಮ ಅನುಮತಿಗಾಗಿ ಕಾಯುತ್ತಿವೆ ಎಂದು ನೆನಪಿಸಿದ್ದಾರೆ.

ಕೇಂದ್ರ ಸರ್ಕಾರದ ಸ್ಪಷ್ಟನೆ

ಎಲಾನ್ ಮಸ್ಕ್ ಅವರ ಆರೋಪಗಳನ್ನು ಕೇಂದ್ರ ಸರ್ಕಾರವೂ ತಳ್ಳಿಹಾಕಿದೆ. ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಬಗ್ಗೆ ಮಾತನಾಡಿ, ಸ್ಯಾಟಲೈಟ್ ಸ್ಪೆಕ್ಟ್ರಮ್ ನಿಯೋಜನೆಯು ನಿರ್ದಿಷ್ಟ ನಿಯಮಾವಳಿಗಳಿಗೆ ಬದ್ಧವಾಗಿದೆ. ಸರ್ಕಾರವು ಆದಾಯ ಹಂಚಿಕೆ ಚೌಕಟ್ಟನ್ನುಅಂತಿಮಗೊಳಿಸಿದ ನಂತರ ಮತ್ತು ಅರ್ಹ ಕಂಪನಿಗಳು ರಾಷ್ಟ್ರೀಯ ಭದ್ರತಾ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸಿದ ತಕ್ಷಣ ಉಪಗ್ರಹ ತರಂಗಾಂತರವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಬೆಳೆಯುತ್ತಿರುವ ಸ್ಯಾಟಲೈಟ್ ಇಂಟರ್ನೆಟ್ ಸ್ಪರ್ಧೆ

ಪ್ರಸ್ತುತ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸ್ಟಾರ್‌ಲಿಂಕ್, ರಿಲಯನ್ಸ್ ಜಿಯೋ ಸ್ಯಾಟಲೈಟ್ ಮತ್ತು ಯುಟೆಲ್‌ಸ್ಯಾಟ್ ಒನ್‌ವೆಬ್ ಕಂಪನಿಗಳು ಅಗತ್ಯ ಆರಂಭಿಕ ಪರವಾನಗಿಗಳನ್ನು ಪಡೆದುಕೊಂಡಿವೆ. ಸಾಂಪ್ರದಾಯಿಕ ಕೇಬಲ್ ಅಥವಾ ಫೈಬರ್ ಬ್ರಾಡ್‌ಬ್ಯಾಂಡ್ ತಲುಪಲು ಕಷ್ಟಕರವಾದ ಹಿಮಾಲಯದ ಗಡಿ ಪ್ರದೇಶಗಳು, ಈಶಾನ್ಯ ರಾಜ್ಯಗಳು ಹಾಗೂ ಗ್ರಾಮೀಣ ಭಾಗಗಳಿಗೆ ತಡೆರಹಿತ ಇಂಟರ್ನೆಟ್ ಒದಗಿಸಲು ಈ ತಂತ್ರಜ್ಞಾನ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದರ ಜೊತೆಗೆ ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯ 'ಪ್ರಾಜೆಕ್ಟ್ ಕೈಪರ್' ಕೂಡ ಭಾರತದಲ್ಲಿ ಉಪಗ್ರಹ ಸೇವೆ ಆರಂಭಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ.