ರಸ್ತೆ ಅಪಘಾತದಲ್ಲಿ ಚಿಕಿತ್ಸೆಗೆ ದಾಖಲಾಗುವ ವ್ಯಕ್ತಿಗಳು ಮತ್ತು ಘಟನೆಯ ವಿವರವನ್ನು ಅಪರಾಧಿಕ ವೈದ್ಯಕೀಯ ಪ್ರಕರಣ (ಮೆಡಿಕೋ ಲೀಗಲ್ ಕೇಸ್) ಅಡಿಯಲ್ಲಿ ನೋಂದಾಯಿಸಿಕೊಳ್ಳದೇ ಇರುವುದರಿಂದ ಸಂತ್ರಸ್ತರಿಗೆ ಪರಿಹಾರ ಸಿಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇನ್ನು ಮುಂದೆ ರಾಜ್ಯದ ಎಲ್ಲ ಆಸ್ಪತ್ರೆಗಳ ವೈದ್ಯರು ಕಡ್ಡಾಯವಾಗಿ ‘ಅಪರಾಧಿಕ ವೈದ್ಯಕೀಯ ಪ್ರಕರಣ’ ಅಡಿ ನೋಂದಾಯಿಸಿ, ಪೊಲೀಸರಿಗೆ ಶಿಫಾರಸು ಮಾಡುವಂತೆ ಮಹತ್ವದ ಆದೇಶ ಹೊರಡಿಸಿದೆ.
ಬೆಂಗಳೂರು(ಜು.31): ರಸ್ತೆ ಅಪಘಾತದಲ್ಲಿ ಚಿಕಿತ್ಸೆಗೆ ದಾಖಲಾಗುವ ವ್ಯಕ್ತಿಗಳು ಮತ್ತು ಘಟನೆಯ ವಿವರವನ್ನು ಅಪರಾಧಿಕ ವೈದ್ಯಕೀಯ ಪ್ರಕರಣ (ಮೆಡಿಕೋ ಲೀಗಲ್ ಕೇಸ್) ಅಡಿಯಲ್ಲಿ ನೋಂದಾಯಿಸಿಕೊಳ್ಳದೇ ಇರುವುದರಿಂದ ಸಂತ್ರಸ್ತರಿಗೆ ಪರಿಹಾರ ಸಿಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇನ್ನು ಮುಂದೆ ರಾಜ್ಯದ ಎಲ್ಲ ಆಸ್ಪತ್ರೆಗಳ ವೈದ್ಯರು ಕಡ್ಡಾಯವಾಗಿ ‘ಅಪರಾಧಿಕ ವೈದ್ಯಕೀಯ ಪ್ರಕರಣ’ ಅಡಿ ನೋಂದಾಯಿಸಿ, ಪೊಲೀಸರಿಗೆ ಶಿಫಾರಸು ಮಾಡುವಂತೆ ಮಹತ್ವದ ಆದೇಶ ಹೊರಡಿಸಿದೆ.
ರಸ್ತೆ ಅಪಘಾತದ ಪ್ರಕರಣದ ನೋಂದಣಿ ಮಾಡುವಲ್ಲಿ ವೈದ್ಯರು ವಹಿಸುತ್ತಿರುವ ನಿರ್ಲಕ್ಷ್ಯತನದಿಂದ ಅಪಘಾತ ನಡೆದಿದ್ದರೂ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿ ನ್ಯಾಯ ಒದಗಿಸಲು ಕೋರ್ಟ್‌ಗಳಿಗೆ ಕಷ್ಟಸಾಧ್ಯವಾಗುತ್ತಿತ್ತು. ಈ ಅಂಶವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ, ರಾಜ್ಯದ ಎಲ್ಲ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಅಥವಾ ಆಡಳಿತಾಧಿಕಾರಿ ಗಳು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗುವ ವ್ಯಕ್ತಿಗಳ ಹಾಗೂ ಅವರಿಗೆ ಕಲ್ಪಿಸಿದ ಚಿಕಿತ್ಸೆಗಳ ವಿವರ ಒಳಗೊಂಡ ‘ಅಪ ರಾಧಿಕ ವೈದ್ಯಕೀಯ ಪ್ರಕರಣ’ವನ್ನು ಕಡ್ಡಾಯ ನೋಂದಾಯಿಸಿ, ಪೊಲೀಸರಿಗೆ ಶಿಫಾರಸು ಮಾಡಬೇಕೆಂದು ಆದೇಶಿಸಿದೆ.
ಅಷ್ಟೇ ಅಲ್ಲದೆ, ಅಪರಾಧಿಕ ವೈದ್ಯಕೀಯ ಪ್ರಕರಣ ನೋಂದಣಿಯ ಕಡತ ಮತ್ತು ಈ ಪ್ರಕರಣದ ಮಾಹಿತಿ ನೀಡುವಂತಹ ಗಾಯದ ಪ್ರಮಾಣಪತ್ರ ವಿತರಿಸಿದ್ದರೆ, ಕೋರ್ಟ್‌ಗೆ ಸಲ್ಲಿಸಲು ಅದನ್ನು ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ಸುರಕ್ಷಿತವಾಗಿಡಬೇಕು. ಈ ಸಂಬಂಧ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣವೇನು?:
ಹಾಸನದ ಕಾಂತರಾಜಪುರ ಗ್ರಾಮದ ನಿವಾಸಿ ಕೆ.ಎಸ್.ದಿನೇಶ್, 2007ರ ಮಾ.12ರಂದು ಚನ್ನರಾಯಪಟ್ಟಣದ ಗೌಡಗೆರೆ ಗೇಟ್‌ಬಳಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಕೆಎ41-ಎಚ್/6305 ಸಂಖ್ಯೆಯ ಬೈಕ್ ನಲ್ಲಿ ಬಂದ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿ ದ್ದರು. ನಂತರ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್, ದಿನೇಶ್‌ಗೆ ಚಿಕಿತ್ಸೆ ನೀಡಿ ಗಾಯದ ಪ್ರಮಾಣಪತ್ರ ನೀಡಿದ್ದರು. ಈ ಮಧ್ಯೆ ಪ್ರಕರಣ ಸಂಬಂಧ ತನಗೆ ಐದು ಲಕ್ಷ ರು. ಪರಿಹಾರ ನೀಡಲು ಬೈಕ್ ಸವಾರನಿಗೆ ಆದೇಶಿಸುವಂತೆ ಕೋರಿ ದಿನೇಶ್, ಮೋಟಾರು ಅಪಘಾತ ಕ್ಲೇಮು ನ್ಯಾಯಾಧಿಕರಣದ (ಎಂಎಸಿಟಿ) ಮೊರೆ ಹೋಗಿದ್ದರು. ಅರ್ಜಿ ಯೊಂದಿಗೆ ಗಾಯದ ಪ್ರಮಾಣಪತ್ರ ಲಗತ್ತಿಸಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಧಿ ಕರಣ, ಗಾಯ ಪ್ರಮಾಣ ಪತ್ರವು ಅಪರಾಧಿಕ ವೈದ್ಯಕೀಯ ಪ್ರಕರಣ ನೋಂದಣಿಯಾಗಿ ಪೊಲೀಸರಿಗೆ ಶಿಫಾರಸು ಮಾಡಿರುವ ಬಗ್ಗೆ ಸೂಚಿಸಿಲ್ಲ. ಇದರಿಂದ ಬೈಕ್ ಡಿಕ್ಕಿಯಿಂದಲೇ ದಿನೇಶ್ ಗಾಯಗೊಂಡಿದ್ದಾನೆ ಎಂಬುದು ದೃಢಪಡಿಸಲು ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು.
ಇದರಿಂದ ಆತ ಹೈಕೋರ್ಟ್ ಮೊರೆ ಹೋಗಿದ್ದ. ಹೈಕೋರ್ಟ್ ಸಹ, ಅಪರಾಧಿಕ ವೈದ್ಯಕೀಯ ಪ್ರಕರಣ ನೋಂದಣಿಯಾಗದ ಕಾರಣ ದಿನೇಶ್‌ಗೆ ಪರಿಹಾರ ಘೋಷಿಸಲು ನಿರಾಕರಿಸಿತು. ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲ ಪವನ್ ಚಂದ್ರಶೆಟ್ಟಿ ವಾದಿಸಿ, ಅಪಘಾತ ಸಂತ್ರಸ್ತರು ಚಿಕಿತ್ಸೆಗಾಗಿ ದಾಖಲಾದರೆ, ಆ ಕುರಿತ ಅಪರಾಧಿಕ ವೈದ್ಯಕೀಯ ಪ್ರಕರಣ ನೋಂದಾಯಿಸಿ ಪೊಲೀಸರಿಗೆ ಶಿಾರಸು ಮಾಡುವುದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರ ಕರ್ತವ್ಯ. ವೈದ್ಯರು ಈ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಹೈಕೋರ್ಟ್ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಹೈಕೋರ್ಟ್, ಮೇಲಿನಂತೆ ಆದೇಶಿಸಿತು.
