ಆದಾಯದೊಂದಿಗೆ ತಮಿಳುನಾಡಿನ ಆಡಳಿತಾರೂಢ ಅಣ್ಣಾಡಿಎಂಕೆ ಹಾಗೂ 15.97 ಕೋಟಿ ರು. ಆದಾಯದೊಂದಿಗೆ ತೆಲುಗುದೇಶಂ ಪಕ್ಷ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ಸಂಸ್ಥೆಯು ಅಂಕಿ-ಅಂಶಗಳನ್ನು ವಿಶ್ಲೇಷಣೆಗೊಳಪಡಿಸಿ ವರದಿ ಬಿಡುಗಡೆ ಮಾಡಿದೆ.
ನವದೆಹಲಿ(ಅ.29): 2015-16ರಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳಿಗೆ ಹರಿದುಬಂದ ಆದಾಯದ ಮಾಹಿತಿ ಹೊರಬಿದ್ದಿದ್ದು, ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ.
ವಿಶೇಷವೆಂದರೆ ಕರ್ನಾಟಕದ ಮುಂಚೂಣಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಕೇವಲ 2 ಕೋಟಿ ಆದಾಯ ಬಂದಿದೆ. 2015-16ರಲ್ಲಿ ತನಗೆ 2.06 ಕೋಟಿ ರು. ಆದಾಯ ಬಂದಿದೆ. ಆದರೆ 2.63 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಜೆಡಿಎಸ್ ಆಯೋಗಕ್ಕೆ ಮಾಹಿತಿ ನೀಡಿದೆ. ದೊಡ್ಡಮಟ್ಟದ ಪಕ್ಷವಾದ ಜೆಡಿಎಸ್‌ಗೆ ಕೇವಲ 2 ಕೋಟಿ ರು. ಆದಾಯ ಬಂದಿರುವುದು ಅಚ್ಚರಿ ಮೂಡಿಸಿದೆ. ಒಟ್ಟಾರೆ ಪ್ರಾದೇಶಿಕ ಪಕ್ಷಗಳ ಆದಾಯದ ಪಟ್ಟಿಯಲ್ಲಿ 2.06 ಕೋಟಿ ರು. ಆದಾಯದೊಂದಿಗೆ ಜೆಡಿಎಸ್ 15ನೇ ಸ್ಥಾನದಲ್ಲಿದೆ.
ಡಿಎಂಕೆ ನಂ.1
2015-16ನೇ ಸಾಲಿನಲ್ಲಿ ದೇಶದ 32 ರಾಜಕೀಯ ಪಕ್ಷಗಳಿಗೆ 221.84 ಕೋಟಿ ರು. ಆದಾಯ ಹರಿದುಬಂದಿದೆ. ಆ ಪೈಕಿ ಡಿಎಂಕೆಯೊಂದಕ್ಕೇ 77.63 ಕೋಟಿ ರು. ಲಭಿಸಿದೆ. 54.93 ಕೋಟಿ ರು. ಆದಾಯದೊಂದಿಗೆ ತಮಿಳುನಾಡಿನ ಆಡಳಿತಾರೂಢ ಅಣ್ಣಾಡಿಎಂಕೆ ಹಾಗೂ 15.97 ಕೋಟಿ ರು. ಆದಾಯದೊಂದಿಗೆ ತೆಲುಗುದೇಶಂ ಪಕ್ಷ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ಸಂಸ್ಥೆಯು ಅಂಕಿ-ಅಂಶಗಳನ್ನು ವಿಶ್ಲೇಷಣೆಗೊಳಪಡಿಸಿ ವರದಿ ಬಿಡುಗಡೆ ಮಾಡಿದೆ.
221.84 ಕೋಟಿ ರು. ಆದಾಯ ಬಂದಿದ್ದರೂ, ಈ ಪೈಕಿ 110 ಕೋಟಿ ರು. ಹಣವನ್ನು ಪ್ರಾದೇಶಿಕ ಪಕ್ಷಗಳು ವೆಚ್ಚವನ್ನೇ ಮಾಡಿಲ್ಲ ಎಂದೂ ತಿಳಿಸಿದೆ. ಅತಿ ಹೆಚ್ಚು ವೆಚ್ಚ ಮಾಡಿದ ಪಕ್ಷಗಳಲ್ಲಿ ಜೆಡಿಯು ಪ್ರಥಮ ಸ್ಥಾನದಲ್ಲಿದೆ. ಆ ಪಕ್ಷ 23.46 ಕೋಟಿ ರು. ವ್ಯಯಿಸಿದೆ. 13.10 ಕೋಟಿ ರು.ನೊಂದಿಗೆ ತೆಲುಗುದೇಶಂ ಹಾಗೂ 11.09 ಕೋಟಿ ರು.ನೊಂದಿಗೆ ಆಮ್ ಆದ್ಮಿ ಪಕ್ಷ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 32 ಪ್ರಾದೇಶಿಕ ಪಕ್ಷಗಳ ಪೈಕಿ 14 ಪಕ್ಷಗಳು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿವೆ. ಜಾರ್ಖಂಡ ವಿಕಾಸ ಮೋರ್ಚಾ- ಪ್ರಜಾತಾಂತ್ರಿಕ, ಜೆಡಿಯು ಹಾಗೂ ಆರ್‌ಎಲ್‌ಡಿ ಪಕ್ಷಗಳು 2015-16ನೇ ಸಾಲಿನಲ್ಲಿ ತಮಗೆ ಲಭಿಸಿದ ಆದಾಯಕ್ಕಿಂತ ಶೇ.200ರಷ್ಟು ವೆಚ್ಚ ಮಾಡಿವೆ ಎಂದು ವರದಿ ಹೇಳಿದೆ. ಡಿಎಂಕೆ, ಎಐಡಿಎಂಕೆ, ಎಐಎಂಐಎಂ ಪಕ್ಷಗಳ ಶೇ.80ರಷ್ಟು ಆದಾಯ ಖರ್ಚೇ ಆಗಿಲ್ಲ ಎಂದು ವರದಿ ವಿವರಿಸಿದೆ.
