DCM DK Shivakumar Tries to Board CM Siddaramaiah's Car at Vidhana Soudha ವಿಧಾನಸೌಧದಲ್ಲಿ ಸಭೆ ಮುಗಿಸಿ ಹೊರಬಂದ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರನ್ನು ತಮ್ಮದೆಂದು ಭಾವಿಸಿ ಏರಲು ಮುಂದಾದರು.

ಬೆಂಗಳೂರು (ಅ.7): ರಾಜ್ಯ ಸರ್ಕಾರದಲ್ಲಿ ಪವರ್‌ ಶೇರಿಂಗ್‌ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮುಜುಗರ ಆಗುವಂಥ ವಿದ್ಯಮಾನ ನಡೆದಿದೆ. ವಿಧಾನಸೌಧದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವಿಚಾರವಾಗಿ ಸಭೆ ನಡೆಸಿದ ಬಳಿಕ ಡಿಸಿಎಂ ವಿಧಾನಸೌಧದಿಂದ ಹೊರಬಂದು, ಸಿಎಂ ಅವರ ಕಾರು ಏರಲು ಹೋದ ಸನ್ನಿವೇಶ ನಡೆದಿದೆ.

ಇದು ಆ ಕ್ಷಣದಲ್ಲಿ ಅಚಾನಕ್‌ ಆದ ಘಟನೆ ಆಗಿದ್ದರೂ, ಇತ್ತೀಚಿನ ರಾಜಕೀಯ ಹಾಗೂ ಪವರ್‌ ಶೇರಿಂಗ್‌ ವಿಚಾರ ಚರ್ಚೆಯಲ್ಲಿರುವಾಗ ಇದು ಮಹತ್ವ ಪಡೆದುಕೊಂಡಿದೆ. ಸಿಎಂ ಕಾರು ಏರಲು ಹೋದ ಡಿಸಿಎಂ ಡಿಕೆಶಿಯನ್ನು ಅವರ ಗನ್‌ಮ್ಯಾನ್‌ ಬಂದು ಕರೆದುಕೊಂಡು ಹೋಗಿದ್ದಾರೆ.

ಆಗಿದ್ದೇನು: ವಿಧಾನಸೌಧದಲ್ಲಿ ನಡೆದ ಸಭೆ ಮುಗಿಸಿ ಡಿಸಿಎಂ ಹೊರಟಿದ್ದರು. ಈ ವೇಳೆ ಕೆಂಗಲ್ ಗೇಟ್ ಬಳಿ ಸಿಎಂ ಕಾರು ನಿಂತಿತ್ತು. ಸಿಎಂ ಡ್ರೈವರ್‌ ಕೂಡ ಸಿಎಂ ಹೊರಗೆ ಬರೋದನ್ನೇ ಕಾಯುತ್ತಿದ್ದರು.

ಓಡೋಡಿ ಬಂದ ಡಿಸಿಎಂ ಗನ್‌ಮ್ಯಾನ್‌

ಡಿಸಿಎಂ ಬರುತ್ತಿದ್ದಂತೆ, ಅವರ ಬೆನ್ನಲ್ಲೇ ಸಿಎಂ ಕೂಡ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಅಲರ್ಟ್‌ ಆದರು. ಆದರೆ, ಡ್ರೈವರ್‌ ಅಲರ್ಟ್‌ ಆಗಿದ್ದನ್ನು ಕಂಡ ಡಿಸಿಎಂ ಡಿಕೆಶಿ, ಅದೇ ತಮ್ಮ ಕಾರು ಇರಬೇಕು ಅಂತ ಸಿಎಂ ಕಾರು ಹತ್ತಲು ಮುಂದಾಗಿದ್ದರು. ಸಿಎಂ ಕಾರಿನ ಡೋರ್ ಹಿಡಿದು ಇನ್ನೇನು ಒಳಗೆ ಕೂರಬೇಕು ಅನ್ನೋವಷ್ಟರಲ್ಲಿ ಅವರ ಗನ್ ಮ್ಯಾನ್ ಓಡಿ ಬಂದಿದ್ದಾರೆ. ಡಿಸಿಎಂ ಡಿಕೆಶಿ ಅವರಿಗೆ ಅದು ತಮ್ಮ ಕಾರಲ್ಲ ಎಂದು ತಿಳಿಸಿ, ಕಾರಿನ‌ ಕಡೆಗೆ ಕರೆದುಕೊಂಡು ಗನ್‌ಮ್ಯಾನ್‌ ಕರೆದುಕೊಂಡು ಹೋಗಿದ್ದಾರೆ.