ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್‌ ಆಹ್ವಾನ ವಿಚಾರದಲ್ಲಿ ಡಿಕೆ ಶಿವಕುಮಾರ್‌ 'ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ' ಎಂದು ಹೇಳಿದ್ದಾರೆ. ಧರ್ಮಸ್ಥಳದ ಘಟನೆಗಳ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧರ್ಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಆ.26): ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್‌ ಅವರಿಗೆ ಆಹ್ವಾನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್‌, 'ಚಾಮುಂಡಿ ಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ' ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಅವರ ನಂಬಿಕೆ ಅದು. ನಾವು ಮಸೀದಿ, ಜೈನ್ ಟೆಂಪಲ್, ಗುರುದ್ವಾರಕ್ಕೆ ಹೋಗುತ್ತೇವೆ. ನಮ್ಮನ್ನು ಹೋಗಬೇಡಿ ಅಂತ ಯಾರಾದರೂ ಹೇಳಿದ್ದಾರಾ? ಮುಸ್ಲಿಂಮರು ಹಿಂದೂಗಳಾಗಿಲ್ವ?ಹಿಂದೂಗಳು ಮುಸ್ಲಿಂ ಆಗಿಲ್ವ? ಅಯೋಧ್ಯೆ ರಾಮನಿಗೆ ಯಾಕೆ ಹಿಂದೂಗಳು ಮಾತ್ರ ಬರಬೇಕು ಅಂತ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಹಿಂದೂ ದೇವಸ್ಥಾನಗಳಿಗೆ ಸಾಕಷ್ಟು ಜನ ಮುಸ್ಲಿಮರು ಬರುತ್ತಾರೆ. ಎಲ್ಲ ಧರ್ಮದ ಜನ ಕೂಡ ಹಿಂದೂ ದೇವಸ್ಥಾನಗಳಿಗೆ ಹೋಗುತ್ತಾರೆ. ಇದು ಸಂವಿಧಾನದ ಮೇಲೆ ನಂಬಿಕೆ ಇರುವ ರಾಷ್ಟ್ರ. ಹಿಂದೂ ಹುಡುಗ ಮುಸ್ಲಿಂ ಮಹಿಳೆ ಇದ್ದರೆ, ಅವರ ಮಗು ಯಾವ ಧರ್ಮ ಬೇಕೋ ಅದನ್ನು ಆಚರಣೆ ಮಾಡುತ್ತದೆ. ಬಾನು ಮುಸ್ತಾಕ್‌, ಕನ್ನಡದಲ್ಲಿ ಬರೆದಾಗ ಯಾರು ಯಾಕೆ ಬರೆದೆ ಅಂತ ಕೇಳಲಿಲ್ಲ ಎಂದು ಹೇಳಿದ್ದಾರೆ. ನಾವು ಧರ್ಮದಲ್ಲಿ ರಾಜಕಾರಣ ಮಾಡಲ್ಲ . ಸಂವಿಧಾನ ಮತ್ತು ಜಾತ್ಯಾತೀತ ತತ್ವದಲ್ಲಿ ಇರುವ ರಾಷ್ಟ್ರ ಎಂದು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು 'ಧರ್ಮದ ರಾಜಕೀಯ' ಮಾಡುವ ಬದಲು 'ಧರ್ಮದಲ್ಲಿ ರಾಜಕೀಯ' ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವನ್ನು ಅಶುದ್ಧಗೊಳಿಸಲು ಮುಂದಾಗಿದ್ದಾರೆ. ಈ ಕ್ಷೇತ್ರ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬಲಿಯಾಗಬಾರದು. ದಕ್ಷಿಣ ಭಾರತದ ಲಕ್ಷಾಂತರ ಭಕ್ತರ ನಂಬಿಕೆ ಇರುವ ಈ ಕ್ಷೇತ್ರವನ್ನು ದುರ್ಬಲಗೊಳಿಸಲು ಅವಕಾಶ ಕೊಡಬಾರದು ಎಂದು ನಾನು ಹೆಗಡೆಯವರಲ್ಲಿ ಮನವಿ ಮಾಡುತ್ತೇನೆ," ಎಂದು ಡಿಕೆಶಿ ಹೇಳಿದರು.

ಅಲ್ಲದೆ, ಧರ್ಮಸ್ಥಳದ ಪ್ರಕರಣವು ಬಿಜೆಪಿಯ ಎರಡು ಬಣಗಳ ನಡುವಿನ ಆಂತರಿಕ ಕಿತ್ತಾಟದಿಂದ ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. "ಭಕ್ತಾದಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ಭಕ್ತರ ನಂಬಿಕೆಗೆ ಲೋಪ ಬಾರದಂತೆ ನಡೆದುಕೊಳ್ಳಬೇಕು. ಬಿಜೆಪಿಯ ಸಭೆಗಳು ಧರ್ಮದ ಸಭೆಗಳಲ್ಲ, ಅವು ರಾಜಕೀಯ ಸಭೆಗಳು. ಇಲ್ಲಿಯವರೆಗೆ ಬಂಧಿತರಾಗಿರುವವರೆಲ್ಲರೂ ಬಿಜೆಪಿಯವರೇ ಆಗಿದ್ದಾರೆ," ಎಂದು ಅವರು ಹೇಳಿದರು.

'ನಮಗೆ ಯಾವುದೇ ಪ್ರಚಾರ ಬೇಡ'

ವಿವಾದದ ಬಗ್ಗೆ ಮಾತನಾಡಿದ ಡಿಕೆಶಿ, ಸರ್ಕಾರವು ವಿಶೇಷ ತನಿಖಾ ದಳವನ್ನು (SIT) ರಚಿಸಿದಾಗ ಬಿಜೆಪಿಯವರು ಸ್ವಾಗತಿಸಿದ್ದರು. ಆದರೆ ಈಗ ಅವರು ಧರ್ಮಸ್ಥಳದಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. "ನಾವು ಎಲ್ಲರಿಗೂ ನ್ಯಾಯ ಒದಗಿಸಲು ಸಿದ್ಧರಿದ್ದೇವೆ. ನಮಗೆ ಯಾವುದೇ ಪ್ರಚಾರ ಬೇಡ. ಈ ಪ್ರಕರಣದಲ್ಲಿ ನ್ಯಾಯಕ್ಕೆ ನಾವು ಬದ್ಧರಾಗಿದ್ದೇವೆ," ಎಂದು ಅವರು ಸ್ಪಷ್ಟಪಡಿಸಿದರು.