ನವದೆಹಲಿ [ಸೆ.14]:  ದೆಹಲಿಯ ಫ್ಲ್ಯಾಟ್‌ಗಳಲ್ಲಿ ಸಿಕ್ಕ 8.5 ಕೋಟಿ ರು. ದಾಖಲೆ ರಹಿತ ಹಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಮತ್ತಷ್ಟುಸಂಕಷ್ಟಎದುರಾಗಿದೆ. ಡಿ.ಕೆ.ಶಿವಕುಮಾರ್‌ 200 ಕೋಟಿ ರು. ಅಕ್ರಮ ಹಣವನ್ನು ಸಕ್ರಮಗೊಳಿಸಲು ಪ್ರಯತ್ನಿಸಿರುವ, 800ಕ್ಕೂ ಹೆಚ್ಚು ಕೋಟಿ ಆಸ್ತಿ ಹೊಂದಿರುವ ಶಂಕೆ ಇದೆ. 20 ಬ್ಯಾಂಕ್‌ಗಳಲ್ಲಿ ಅವರು ಖಾತೆಗಳನ್ನು ಹೊಂದಿದ್ದು, 317ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆಸಿದ್ದಾರೆಂದು ಇ.ಡಿ. ಗಂಭೀರ ಆರೋಪ ಮಾಡಿದೆ.

ಡಿ.ಕೆ.ಶಿವಕುಮಾರ್‌ ಅವರನ್ನು ಶುಕ್ರವಾರ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನ್ಯಾಯಾಲಯ ಈ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ 5 ದಿನಕಾಲ ಮತ್ತೆ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿತು. ಇ.ಡಿ. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ನಾಲ್ಕು ದಿನಗಳ ಕಾಲ ಅಂದರೆ ಸೆ.17ರ ವರೆಗೆ ಡಿ.ಕೆ.ಶಿವಕುಮಾರ್‌ ಅವರನ್ನು ಮತ್ತೆ ಇ.ಡಿ. ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಈ ಹಿಂದೆ ಸೆ.4ರಂದು ಡಿ.ಕೆ.ಶಿವಕುಮಾರ್‌ರನ್ನು ಇದೇ ನ್ಯಾಯಾಲಯ 10 ದಿನಗಳ ಕಾಲ ಇ.ಡಿ. ಕಸ್ಟಡಿಗೆ ನೀಡಿತ್ತು. ಆ ಕಸ್ಟಡಿ ಅವಧಿ ಶುಕ್ರವಾರ ಮುಕ್ತಾಯಗೊಂಡಿತ್ತು.

ಕ್ಲಾಸಿಕ್‌ ಪ್ರಕರಣ:  ಇ.ಡಿ. ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ.ಎಂ.ನಟರಾಜ್, ಡಿ.ಕೆ. ಶಿವಕುಮಾರ್‌ ಅವರು ಅಕ್ರಮ ಹಣ ವರ್ಗಾವಣೆಗೆ ವಿಲಕ್ಷಣ ದಾರಿಗಳನ್ನು ಹುಡುಕಿದ್ದಾರೆ. ಅವರ ಅಕ್ರಮ ಹಣ ವರ್ಗಾವಣೆಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕಿದೆ, ಡಿ.ಕೆ. ಶಿವಕುಮಾರ್‌ ಅವರು 20 ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದು ತನ್ನ, ತನ್ನ ಕುಟುಂಬಸ್ಥರ ಮತ್ತು ಆಪ್ತರ 317 ಬ್ಯಾಂಕ್‌ ಖಾತೆಗಳಲ್ಲಿ ಅವ್ಯವಹಾರ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್‌ ಬಳಿ 800 ಕೋಟಿ ರು. ಆಸ್ತಿ ಪತ್ತೆಯಾಗಿದ್ದು, 200 ಕೋಟಿ ರು. ಅಕ್ರಮ ಹಣವನ್ನು ಸಕ್ರಮಗೊಳಿಸಲು ಪ್ರಯತ್ನಿಸಿರುವ, 3 ಖಾತೆಗಳಲ್ಲಿ ಭಾರೀ ಮೊತ್ತದ ವ್ಯವಹಾರ ನಡೆಸಿರುವ ಮಾಹಿತಿ ಇದೆ. ಅವರದ್ದು ಅಕ್ರಮ ಹಣ ವರ್ಗಾವಣೆಯ ಕ್ಲಾಸಿಕ್‌ ಕೇಸ್‌. ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ಬ್ಯಾಂಕ್‌ ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ. ಈವರೆಗೆ 8 ಜನರನ್ನು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದೇವೆ ಎಂದು ವಾದಿಸಿದರು.

ಹಣವನ್ನು ಸಕ್ರಮಗೊಳಿಸಲು ಕ್ರಿಮಿನಲ್ ಪಿತೂರಿ ನಡೆಸಲಾಗಿದೆ. ಹಣಕಾಸು ವಹಿವಾಟು ಕುರಿತ ಪ್ರಶ್ನೆಗಳಿಗೆ ಅವರು ಸರಿಯಾಗಿ ಉತ್ತರಿಸಿಲ್ಲ. ನಿದ್ದೆ ಬರುತ್ತಿದೆ, ಆಯಾಸವಾಗಿದೆ ಎಂದು ನೆಪ ಹೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಲು ಸುದೀರ್ಘ ಸಮಯ ತೆಗೆದುಕೊಂಡಿದ್ದಾರೆ. ಅಪ್ರಸ್ತುತ ಉತ್ತರ ನೀಡುತ್ತಾರೆ. ಸಮಯ ವ್ಯರ್ಥ ಮಾಡುತ್ತಾರೆ. ಇವರ ಅವ್ಯವಹಾರ ದೇಶದ ಆರ್ಥಿಕತೆಗೆ ಹಾನಿ ಉಂಟು ಮಾಡುವ ಸ್ವರೂಪದ್ದು. ತಾಯಿ, ಹೆಂಡತಿ, ಮಗಳ ಹೆಸರಿನಲ್ಲಿ ಅಕ್ರಮ ನಡೆಸಲಾಗಿದೆ ಎಂದು ನಟರಾಜ… ಕೋರ್ಟ್‌ ಮುಂದೆ ಹೇಳಿದರು.

ಇಡಿ ವಶದಲ್ಲಿದ್ದರೂ ಟ್ವೀಟ್ ಮಾಡಿದ ಡಿಕೆಶಿ... ಒಂದೇ ಮಾತು

ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಾಧೀಶ ಅಜಯ್ ಕುಮಾರ್‌ ಕುಹಾರ್‌, ಈವರೆಗೆ ಮಾಹಿತಿ ನೀಡಿಲ್ಲ ಎಂದರೆ ಇನ್ನೂ 5 ದಿನ ಕಸ್ಟಡಿಗೆ ನೀಡಿದರೆ ಹೇಗೆ ಮಾಹಿತಿ ನೀಡುತ್ತಾರೆ? ನಿಮ್ಮ ಕಸ್ಟಡಿಗೆ ನೀಡಿದ್ರೂ ಅವರು ಉತ್ತರಿಸಲ್ಲ ಎಂದು ನನಗೆ ಖಾತ್ರಿ ಇದೆ, ಬೇನಾಮಿ ಆಸ್ತಿ ಪತ್ತೆ ಹಚ್ಚಿದ್ದೀರಾ? ಈವರೆಗೆ ಒಂದೇ ಕೇಸ್‌ ದಾಖಲಿಸಿರುವುದು ಬಿಟ್ಟು ಬೇರೆ ಕೇಸ್‌ ಹಾಕಿದ್ದೀರಾ? ಎಂದು ನಟರಾಜ್ ಅವರನ್ನು ಪ್ರಶ್ನಿಸಿದರು.

ನಾವು ಮಾಹಿತಿ ಪಡೆದುಕೊಳ್ಳಲು ಆರೋಪಿಯ ವಿಚಾರಣೆ ನಡೆಸಬೇಕು. ಪ್ರಕರಣದಲ್ಲಿನ ಇತರ ಆರೋಪಿಗಳ ಹೇಳಿಕೆಗಳು, ಪತ್ತೆಯಾಗಿರುವ ದಾಖಲೆಗಳನ್ನು ಆರೋಪಿ ಮುಂದೆ ಮುಖಾಮುಖಿಗೊಳಿಸಿ ತನಿಖೆ ನಡೆಸಬೇಕು. ಅವರು ಎಲ್ಲೆಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬುದರ ಜೊತೆಗೆ ಅವರ ಮೂಲ, ಹಿನ್ನೆಲೆಗಳನ್ನು, ಅಕ್ರಮಗಳನ್ನು ಪತ್ತೆ ಹಚ್ಚಬೇಕು. ಜಮೀನು ಪತ್ತೆಯಾಗಿದ್ದು ಆ ಜಮೀನು ಹೇಗೆ ಸ್ವಾಧೀನಕ್ಕೆ ಬಂದಿದೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಪಿಎಂಎಲ… ಕಾಯ್ದೆ ಪ್ರಕಾರ ನಾವು ಅಕ್ರಮದ ಪಥ ಪತ್ತೆ ಹಚ್ಚಿಕೊಂಡು ಹೋಗುತ್ತೇವೆ. ಸದ್ಯ ನಾವು ಒಂದು ಕೇಸ್‌ ಹಾಕಿದ್ದು ಮುಂದಿನ ದಿನಗಳಲ್ಲಿ ವಿಚಾರಣೆಯಲ್ಲಿ ಹೊರ ಬರುವ ಮಾಹಿತಿಗೆ ಅನುಗುಣವಾಗಿ ಪ್ರತ್ಯೇಕ ಕೇಸ್‌ಗಳನ್ನು ಹಾಕುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ… ಸಮರ್ಥಿಸಿಕೊಂಡರು.

ಡಿ.ಕೆ.ಶಿವಕುಮಾರ್‌ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ತಮ್ಮ ಕಕ್ಷಿದಾರನಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ರಕ್ತದೊತ್ತಡದಲ್ಲಿ ಏರುಪೇರಾಗಿದೆ. 13 ದಿನಗಳಿಂದ 130 ಗಂಟೆ ವಿಚಾರಣೆ ನಡೆಸಿದರೆ ನಿದ್ದೆ ಬರುವುದು, ಬಳಲಿಕೆ ಆಗುವುದು ಸಹಜ. ಅವರಿಗೆ ಸ್ಟರೋಕ್ ಆಗುವ ಸಾಧ್ಯತೆಯೂ ಇದೆ. ಕಕ್ಷಿದಾರರು ಇ.ಡಿ. ಕರೆದಾಗಲೆಲ್ಲ ಹಾಜರಾಗಿ ವಿಚಾರಣೆ ಎದುರಿಸಲು ಸಿದ್ಧರಿದ್ದಾರೆ, ಅವರಿಗೆ ಜಾಮೀನು ನೀಡಿ ಎಂದು ಮನವಿ ಮಾಡಿದರು. ಜತೆಗೆ, ಇ.ಡಿ. ವಿಚಾರಣೆ ಪ್ರಕ್ರಿಯೆ ಬಗ್ಗೆಯೂ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನು ವಿರೋಧಿಸಿದ ಎಎಸ್‌ಜಿ, ತನಿಖೆ ಹೇಗೆ ನಡೆಸಬೇಕೆಂದು ತನಿಖಾ ಸಂಸ್ಥೆ ನಿರ್ಧರಿಸಬೇಕೇ ಹೊರತು ಆರೋಪಿಯಲ್ಲ ಎಂದರು. ಇದೇ ವೇಳೆ ಡಿ.ಕೆ. ಶಿವಕುಮಾರ್‌ರಿಂದ ಅವರ ಆರೋಗ್ಯ ಸ್ಥಿತಿ ಬಗ್ಗೆ ನ್ಯಾಯಾಧೀಶರು ಮಾಹಿತಿ ಪಡೆದುಕೊಂಡರು. ನಾನು ಗುರುವಾರ 1 ಗಂಟೆಯವರೆಗೆ ಅಸ್ಪತ್ರೆಯಲ್ಲಿದ್ದೆ. ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆರೋಗ್ಯದಲ್ಲಿ ಏರುಪೇರಿದೆ ಎಂದು ಡಿ.ಕೆ. ಶಿವಕುಮಾರ್‌ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ಆರೋಪಿಯ ಜಾಮೀನು ಅರ್ಜಿಗೆ ಸೋಮವಾರ ಆಕ್ಷೇಪ ಸಲ್ಲಿಸುವುದಾಗಿ ಇಡಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಯ ಆರೋಗ್ಯ ಸ್ಥಿತಿಯನ್ನು ನಾವು ನಿರ್ಲಕ್ಷ್ಯ ಮಾಡಬಾರದು. ಅವರ ವೈದ್ಯಕೀಯ ತಪಾಸಣೆ ನಡೆಯಬೇಕು. ತನಿಖಾಧಿಕಾರಿಗಳು ಆರೋಪಿ ಆರೋಗ್ಯ ಕಾಳಜಿ ಮಾಡಬೇಕು. ಆರೋಪಿಯನ್ನು ಅಗತ್ಯ ಬಿದ್ದಾಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು, ಔಷಧಿ ನೀಡಬೇಕು. ಪ್ರತಿ 24 ಗಂಟೆಗೊಮ್ಮೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಹೇಳಿದರು. ತನಿಖಾ ಸಂಸ್ಥೆಗೆ ಮುಕ್ತ, ನ್ಯಾಯಸಮ್ಮತ ಮತ್ತು ಸಂಪೂರ್ಣ ವಿಚಾರಣೆ ನಡೆಸಲು ಅವಕಾಶ ಸಿಗಬೇಕು ಎಂದು ಹೇಳಿ, ಸೆ.17ರವೆಗೆ ಕಸ್ಟಡಿಗೆ ಒಪ್ಪಿಸಿದರು.