ಬೆಂಗಳೂರು (ಜು. 03): ದೇವೇಗೌಡರ ಪತ್ರಿಕಾಗೋಷ್ಠಿ ಎಂದ ಮೇಲೆ ಸಿಟ್ಟು ಸೆಡವು, ಅಯ್ಯೋ ರಾಮ, ಅಯ್ಯೋ ಶಿವನೇ, ಸ್ವಲ್ಪ ಬಂದೆ ಇರಿ ಸಾರ್‌, ಜೀವನದಲ್ಲಿ ಇಂಥ ಕೆಟ್ಟಸರ್ಕಾರ ನೋಡಿಲ್ಲ... ಎಂಬ ಪದ ಪ್ರಯೋಗಗಳು ಮಾಮೂಲು. ಆದರೆ ಅಧಿಕಾರ ಹಿಡಿದ ನಂತರ ಮೊದಲ ಬಾರಿ ದಿಲ್ಲಿಯಲ್ಲಿ 45 ನಿಮಿಷ ಮಾತನಾಡಿದ ದೇವೇಗೌಡರು ನಗು ನಗುತ್ತಲೇ ಇದ್ದರೇ ಹೊರತು ಒಮ್ಮೆಯೂ ಮುಖ ಗಂಟು ಹಾಕಲಿಲ್ಲ.

ಎಲ್ಲ ಪ್ರಶ್ನೆಗಳಿಗೂ ಸುದೀರ್ಘ ಉತ್ತರ ನೀಡಿದ ಗೌಡರು ಸಿದ್ದರಾಮಯ್ಯ ಬಗ್ಗೆ ಮಾತ್ರ ಎಷ್ಟೇ ಕೆದಕಿದರೂ ಒನ್‌ಲೈನ್‌ ಉತ್ತರ ನೀಡಿ ಸುಮ್ಮನಾಗುತ್ತಿದ್ದರು. ಸಿದ್ದು ಒಂದು ವರ್ಷದವರೆಗೆ ಸರ್ಕಾರದ ಆಯುಷ್ಯ ಎಂದಿದ್ದಾರೆ ಎಂದು ಕೇಳಿದಾಗ, ಡಿಸೆಂಬರ್‌ನಲ್ಲಿಯೇ ಲೋಕಸಭಾ ಚುನಾವಣೆ ಬರುತ್ತದೆ ಎಂದರು. ಸಮನ್ವಯ ಸಮಿತಿಗೆ ಸಿದ್ದು ನೇಮಿಸಿದ್ದು ನಾವಲ್ಲ ಕಾಂಗ್ರೆಸ್‌ ಎಂದ ದೇವೇಗೌಡರು, ಲೋಕಸಭಾ ಸೀಟ್‌ ಹಂಚಿಕೆ ಬಗ್ಗೆ ನಾನೇನಿದ್ದರೂ ರಾಹುಲ… ಗಾಂಧಿ ಜೊತೆ ಮಾತನಾಡುತ್ತೇನೆಯೇ ಹೊರತು ರಾಜ್ಯ ನಾಯಕರ ಜೊತೆ ಅಲ್ಲ ಎಂದರು.

ಪತ್ರಕರ್ತರು ಏನೇ ಕೇಳಿದರೂ ಕೋಪಿಸಿಕೊಳ್ಳದ ದೇವೇಗೌಡರು,‘ಪಾಪ ನಿಮ್ಮದೇನು ತಪ್ಪು. ಕಣ್ಣಿಗೆ ಕಾಣೋದು ವರದಿ ಮಾಡ್ತೀರಿ’ ಎಂದರು. ಹತ್ತು ವರ್ಷದ ಹಿಂದೊಮ್ಮೆ ಹೀಗೆ ಪ್ರಶ್ನೆ ಕೇಳಿದ ಹಿಂದಿ ವರದಿಗಾರನೊಬ್ಬನಿಗೆ ‘ನಿಮ್ಮ ವರದಿಗಾರಿಕೆ ಜೀವನದ ಮೂರುಪಟ್ಟು ನನ್ನ ರಾಜಕೀಯ ಆಯುಷ್ಯ ಆಗಿದೆ. ಸಿಟ್‌ಡೌನ್‌ ನಾನ್ಸೆನ್ಸ್‌ ’ಎಂದಿದ್ದರು. ಆಂಗ್ಲ ವರದಿಗಾರ ಒಬ್ಬನು ಕಠಿಣ ಪ್ರಶ್ನೆ ಕೇಳಿದ್ದಕ್ಕೆ ‘ಗೋ ಅಂಡ್‌ ಆಸ್ಕ್‌ ಯುವರ್‌ ಎಡಿಟರ್‌. ಅವರು ಹೇಳುತ್ತಾರೆ ನನ್ನ ಬಗ್ಗೆ’ ಎಂದು ಸಿಟ್ಟಿನಿಂದ ಹೇಳಿ ಸುಮ್ಮನಾಗಿಸಿದ್ದರು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ವಿಶೇಷ ವರದಿಗಾರ