ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಸಭೆ ಮುಕ್ತಾಯ | ಸೀಟು ಹಂಚಿಕೆ ಬಗ್ಗೆ ದೇವೇಗೌಡ-ರಾಹುಲ್ ಗಾಂಧಿ ಮಹತ್ವದ ಸಭೆ |
ಬೆಂಗಳೂರು (ಮಾ. 06): ಕರ್ನಾಟಕದ ಕಾಂಗ್ರೆಸ್, ಜೆಡಿಎಸ್ ನಡುವೆ ಸೀಟು ಹಂಚಿಕೆ ಬೆಂಗಳೂರಿನಲ್ಲಿ ಸಾಧ್ಯವಾಗದೇ ದಿಲ್ಲಿಗೆ ಶಿಫ್ಟ್ ಆಗಿ, ದೇವೇಗೌಡರು-ರಾಹುಲ್ ಗಾಂಧಿ ಮಧ್ಯೆ ‘ಚಾಯ್ ಪೆ ಚರ್ಚಾ’ ನಿಗದಿಯಾಗಿದ್ದು ಸರಿಯಷ್ಟೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ಮಾತುಕತೆ ಮುಂದೆ ಹೋಗಲು ಬಿಡದೇ ಇರುವುದರಿಂದ ಗೌಡರು ನೇರವಾಗಿ ಮೊದಲ ಸುತ್ತನ್ನು ರಾಹುಲ್ ಗಾಂಧಿ ಜೊತೆಯೇ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ.
"
ಖರ್ಗೆ ಬಗ್ಗೆ ಚಕಾರವೆತ್ತದ ಮೋದಿ: ಪ್ಲ್ಯಾನ್ ಏನಿರಬಹುದು?
ಕಾಂಗ್ರೆಸ್ 6ಕ್ಕೆ, ದೇವೇಗೌಡರು 12ಕ್ಕೆ ಪಟ್ಟು ಹಿಡಿದಿದ್ದರೂ ಕೂಡ 8ರಿಂದ 9ರ ಆಸುಪಾಸು ಸೀಟು ದೊರೆತರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ದೇವೇಗೌಡರು ಇದ್ದಾರೆ. ನೇರವಾಗಿ ರಾಹುಲ್ ಜೊತೆ ಕುಳಿತರೆ ಒಂದೆರಡು ಸೀಟು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು ಎಂದೇ ಗೌಡರು ಮಾತುಕತೆಯನ್ನು ಬೆಂಗಳೂರಿನಿಂದ ದಿಲ್ಲಿಗೆ ಶಿಫ್ಟ್ ಮಾಡಿಸಿದ್ದಾರೆ. ಇಂದು ಒಂದು ಸುತ್ತಿನ ಮಾತುಕತೆ ಮುಕ್ತಾಯಗೊಂಡಿದೆ.
ಆಗ ಅಮ್ಮ, ಈಗ ಮಗ ಗೌಡರ ಮನೆಗೆ
1997 ರಲ್ಲಿ ದೇವೇಗೌಡರಿಗೆ ಸೀತಾರಾಮ ಕೇಸರಿ ಕೈ ಕೊಟ್ಟನಂತರ 1999 ರಲ್ಲಿ ಸೋನಿಯಾ ಗಾಂಧಿ ತನಗೆ ಪ್ರಧಾನಿ ಆಗುವ ಅವಕಾಶ ಬಂದರೆ ಸಹಾಯಕ್ಕೆ ನಿಲ್ಲಿ ಎಂದು ಕೇಳಲು ದೇವೇಗೌಡರ ದೆಹಲಿ ಮನೆಗೆ ಹೋಗಿದ್ದರು. ಮೀಟಿಂಗ್ ಬಳಿಕ ಪತ್ರಕರ್ತರು ಸುತ್ತುವರೆದಾಗ ಗೌಡರು ಹೆಣ್ಣು ಮಗಳು ಮನೆಗೆ ಬಂದು ಸಹಾಯ ಕೇಳಿದಾಗ ಇಲ್ಲ ಅನ್ನೋಕೆ ಆಗುತ್ತಾ ಎಂದಿದ್ದರಂತೆ.
10 ಸೀಟಿಗೆ ಪಟ್ಟು ಹಿಡಿದ ದೇವೇಗೌಡ್ರು; ಏನಾಯ್ತು ರಾಹುಲ್-ದೇವೇಗೌಡ್ರ ಸಭೆ?
ಇದಾದ ಬಳಿಕ ಗೌಡರು ಸೋನಿಯಾರನ್ನು ಅವರ ಮನೆಗೆ ಹೋಗಿ ಭೇಟಿ ಆಗಿದ್ದು 2004ರಲ್ಲಿ. ಧರ್ಮಸಿಂಗ್‌ರನ್ನು ಮುಖ್ಯಮಂತ್ರಿ ಮಾಡಿ, ನಾನು ಬೆಂಬಲ ಕೊಡುತ್ತೇನೆ ಎಂದು ಹೇಳುವುದಕ್ಕೆ ಗೌಡರು ಹೋಗಿದ್ದರು. ನಂತರ 2009 ರಲ್ಲಿ ಲೋಕಸಭಾ ಫಲಿತಾಂಶದ ಹಿಂದಿನ ದಿನ ಸಂಜೆ ಕುಮಾರಸ್ವಾಮಿ ಅವರು ರಹಸ್ಯ ಕಾರಣಗಳಿಗಾಗಿ ಸೋನಿಯಾ ಮನೆಗೆ ಹೋಗಿದ್ದರು. ಅದೆಲ್ಲ ನಡೆದ ಹತ್ತು ವರ್ಷಗಳ ನಂತರ ಇವತ್ತು ರಾಹುಲ್ ಮೊದಲ ಬಾರಿಗೆ ದೇವೇಗೌಡರ ಮನೆಗೆ ಬಂದಿದ್ದಾರೆ. ಬುಧವಾರ ಉಪಾಹಾರಕ್ಕೆ ಬನ್ನಿ ಎಂದು ಗೌಡರು ಕರೆದರೂ, ‘ಬೇಡ, ಚಹಾ ಕುಡಿಯಲು ಹತ್ತು ಗಂಟೆಗೆ ಬರುತ್ತೇನೆ’ ಎಂದು ಹೇಳಿದ್ದರಂತೆ ರಾಹುಲ್ ಗಾಂಧಿ.
ಗೌಡರ ದಿಲ್ಲಿ ಶಿಷ್ಯನಿಗೆ ಕೊನೆಗೂ ಟಿಕೆಟ್
ಕೊನೆಗೂ ದೇವೇಗೌಡರು ತನ್ನ ದಿಲ್ಲಿಯ ಪಟ್ಟದ ಶಿಷ್ಯ ಡ್ಯಾನಿಶ್ ಅಲಿಗೆ ಉತ್ತರ ಪ್ರದೇಶದಿಂದ ಒಂದು ಟಿಕೆಟ್ ಕೊಡಿಸುವಲ್ಲಿ ಬಹುತೇಕ ಶೇ.90 ಯಶಸ್ವಿಯಾಗಿದ್ದಾರೆ. ಗೌಡರು ಸತತವಾಗಿ ಮಾಯಾವತಿ ಮತ್ತು ಅಖಿಲೇಶ್ ಅವರಿಗೆ ಬೆನ್ನು ಹತ್ತಿದ್ದರಿಂದ ದಿಲ್ಲಿಗೆ ಹತ್ತಿಕೊಂಡೇ ಇರುವ ಹಾಪುರ್‌ದಿಂದ ಡ್ಯಾನಿಶ್ ಆಲಿ ಮಹಾಗಠ ಬಂಧನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.
ಆದರೆ ಮಾಯಾವತಿ ಯುಪಿಯಲ್ಲಿ ತೆನೆ ಹೊತ್ತ ಮಹಿಳೆಗೆ ಜನ ವೋಟ್ ಹಾಕೋದು ಕಷ್ಟ. ಆನೆ ಗುರುತಿನ ಮೇಲೆ ನಿಲ್ಲಿ ಎಂದು ಹೇಳುತ್ತಿದ್ದು, ಬೇಡ ಜೆಡಿಎಸ್‌ನಿಂದ ನಿಲ್ಲಲಿ ಎಂದು ದೇವೇಗೌಡರು ಪ್ರಯತ್ನ ನಡೆಸಿದ್ದಾರೆ. ಡ್ಯಾನಿಶ್ ಸ್ಪರ್ಧೆಯಿಂದಾದರೂ ಜೆಡಿಎಸ್‌ಗೆ ರಾಷ್ಟ್ರೀಯ ಸ್ವರೂಪ ಬರಲಿ ಎಂದು ದೇವೇಗೌಡರ ಮನಸ್ಸಿನಲ್ಲಿ ಇರಬಹುದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 6, 2019, 7:34 PM IST