ಬೆಂಗಳೂರು (ಮಾ. 04):  ಗೃಹಿಣಿಗೆ ಪತಿ ಹಾಗೂ ಆತನ ಕುಟುಂಬ ಸದಸ್ಯರು ‘ಅನ್ನ-ಬಟ್ಟೆ’ ಕೊಡದಿರುವುದು ಕ್ರೌರ್ಯ ಎಂದಾಗುವುದಿಲ್ಲ ಎಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಿಸಿಸಿಐಗೆ ಐಸಿಸಿಯಿಂದ 150 ಕೋಟಿ ರುಪಾಯಿ ತೆರಿಗೆ ಹೊರೆ!

ಗೃಹಿಣಿಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಹಾಗೂ ಕ್ರೌರ್ಯ ಮೆರೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

’ಕಾರ್'ಗಿಚ್ಚು: RTO ಅಧಿಕಾರಿಗಳ ಎಡವಟ್ಟು, ವಿಮೆಗಾಗಿ ಮಾಲಿಕರ ಪರದಾಟ!

ಮೈಸೂರಿನ ಹಸೀನಾ ಹಾಗೂ ರಶೀದ್‌ (ಇಬ್ಬರ ಹೆಸರು ಬದಲಿಸಲಾಗಿದೆ) 1993ರಲ್ಲಿ ಮದುವೆಯಾಗಿದ್ದರು. ದಂಪತಿಗೆ ನಾಲ್ವರು ಮಕ್ಕಳಿದ್ದರು. ಮದುವೆಯಾದ ಎರಡೇ ವರ್ಷಕ್ಕೆ ಅವರು ಪ್ರತ್ಯೇಕಗೊಂಡಿದ್ದರು. ಹಸೀನಾ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

2014ರ ಆ.21ರಂದು ಪತಿಗೆ ಕರೆ ಮಾಡಿದ್ದ ಹಸೀನಾ, ‘ನಾನು ತೀವ್ರತರದ ತಲೆನೋವಿಂದ ನರಳುತ್ತಿದ್ದೇನೆ. ಕೂಡಲೇ ನೀನು ಮನೆಗೆ ಬರಬೇಕು. ತಪ್ಪಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದರು.

ಆದರೆ, ರಶೀದ್‌ ‘ನಾನು ಮನೆಗೆ ಬರುವುದಿಲ್ಲ. ನೀನೇನಾದರೂ ಮಾಡಿಕೊ’ ಎಂದು ಉತ್ತರಿಸಿದ್ದರು. ಪತಿಯ ಈ ನಿಷ್ಠುರ ಉತ್ತರದಿಂದ ಬೇಸತ್ತ ಹಸೀನಾ ಮರುದಿನ ಅಂದರೆ 2014ರ ಆ.22ರಂದು ಬೆಳಗ್ಗೆ 9ಗಂಟೆಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಚಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನರಸಿಂಹರಾಜ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ್ದ ಪೊಲೀಸರು ರಶೀದ್‌, ಆತನ ತಾಯಿ ಹಾಗೂ ಸಹೋದರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 498(ಎ)ಅಡಿ ಕ್ರೌರ್ಯ ಮೆರೆದ ಮತ್ತು ಸೆಕ್ಷನ್‌ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಸೆಕ್ಷನ್‌ 34 ಅಡಿ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪ ಸಂಬಂಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ತಮ್ಮ ವಿರುದ್ಧದ ಈ ದೋಷಾರೋಪಪಟ್ಟಿರದ್ದುಪಡಿಸುವಂತೆ ಕೋರಿ ಪ್ರಕರಣದ ಎರಡನೇ ಆರೋಪಿಯಾಗಿದ್ದ ರಶೀದ್‌ ತಾಯಿ ಹಾಗೂ ಮೂರನೇ ಆರೋಪಿಯಾಗಿದ್ದ ಸೋದರ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹಸೀನಾ ಪರ ವಕೀಲರು, ಅರ್ಜಿದಾರರು ಮೃತಳೊಂದಿಗೆ ಅಹಿತಕರವಾಗಿ ವರ್ತಿಸುತ್ತಿದ್ದರು. ಅನ್ನ-ಬಟ್ಟೆನೀಡುತ್ತಿರಲಿಲ್ಲ. ಇದರಿಂದ ರೋಸಿಹೋಗಿದ್ದ ಹಸೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಅರ್ಜಿದಾರರ ಪರ ವಕೀಲರು ಅಲ್ಲೆಗೆಳೆದಿದ್ದರು.

ಮಹತ್ವದ ಅಭಿಪ್ರಾಯ:

ಅರ್ಜಿದಾರರ ವಿರುದ್ಧದ ದೋಷಾರೋಪ ಪಟ್ಟಿಯನ್ನು ಕೂಲಂಕಷವಾಗಿ ಹಾಗೂ ಸೂಕ್ಷ್ಮವಾಗಿ ಪರಿಶೀಲಿಸಿದ ಹೈಕೋರ್ಟ್‌, ‘ಮದುವೆಯಾದ ಎರಡೇ ವರ್ಷಕ್ಕೆ ದಂಪತಿ ಬೇರ್ಪಟ್ಟಿದ್ದಾರೆ. ಮೃತಳು ಮಕ್ಕಳೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಇದರಿಂದ ರಶೀದ್‌ ತಾಯಿ ಹಾಗೂ ಸಹೋದರ ಹಸೀನಾ ಜೊತೆಗೆ ವಾಸವಿರಲಿಲ್ಲ.

ಆರೋಪಿಗಳು ಹಸೀನಾರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಹಾಗೂ ಅನ್ನ-ಬಟ್ಟೆನೀಡದೆ ಶೋಷಿಸಿ ಕಿರುಕುಳ ನೀಡಿದ್ದರು ಎಂಬುದು ಸುಳ್ಳು ಹಾಗೂ ನಂಬಲರ್ಹವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಅನ್ನ-ಬಟ್ಟೆನೀಡದಿರುವುದು ಕ್ರೌರ್ಯ ಎಂದಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಆತ್ಮಹತ್ಯೆಗೆ ಪ್ರಚೋದನೆ ನೀಡಲಾಯಿತು ಎಂಬ ಆರೋಪ ಪರಿಶೀಲಿಸುವುದಾದರೆ, ರಶೀದ್‌ ಮನೆಗೆ ಬರುವುದಿಲ್ಲ ಎಂದು ಹೇಳಿದ ತಕ್ಷಣವೇ ಹಸೀನಾ ಆತ್ಮಹತ್ಯೆಗೆ ಶರಣಾಗಿಲ್ಲ. 2014ರ ಆ.21ರಂದು ಹಸೀನಾ ಕರೆ ಮಾಡಿದ್ದರೆ, ಮರುದಿನ ಅಂದರೆ ಆ.22ರಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಇನ್ನು ‘ಮನೆಗೆ ಬರುವುದಿಲ್ಲ, ನೀನು ಏನಾದರೂ ಮಾಡಿಕೋ’ ಎಂದು ರಶೀದ್‌ ಹೇಳಿಕೆ ನೀಡಿರುವುದು ‘ಆತ್ಮಹತ್ಯೆಗೆ ನೀಡಿದ ಪ್ರಚೋದನೆ’ ಎಂದು ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು.

ದೋಷರೋಪ ಪಟ್ಟಿರದ್ದು:

ಅಂತಿಮವಾಗಿ ರಶೀದ್‌ ತಾಯಿ ಹಾಗೂ ಸೋದರನ ವಿರುದ್ಧ ಕ್ರೌರ್ಯ ಮೆರೆದ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ದೋಷರೋಪ ಪಟ್ಟಿದಾಖಲಿಸಿರುವುದು ಅಕ್ರಮ ಹಾಗೂ ಕೋರ್ಟ್‌ ಪ್ರಕ್ರಿಯೆಯ ದುರ್ಬಳಕೆಯಾಗಿದೆ. ಹೀಗಾಗಿ ಪ್ರಕರಣದ ಮುಂದುವರಿಯಲು ಅವಕಾಶ ಕಲ್ಪಿಸಲಾಗದು ಎಂದು ತಿಳಿಸಿದ ಹೈಕೋರ್ಟ್‌, ರಶೀದ್‌ ತಾಯಿ ಹಾಗೂ ಸೋದರನ ಮೇಲಿನ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿದೆ. ಆದರೆ ರಶೀದ್‌ ವಿರುದ್ಧದ ಪ್ರಕರಣ ಮಾತ್ರ ಮುಂದುವರಿದಿದೆ.

- ವೆಂಕಟೇಶ್ ಕಲಿಪಿ