ಏರ್‌ಶೋ ವೇಳೆ ಅಗ್ನಿ ಅನಾಹುತ ! ಸುಟ್ಟುಹೋದ ಕೆಲ ಕಾರುಗಳ ಎಂಜಿನ್‌, ಚಾರ್ಸಿ ಸಂಖ್ಯೆ ತಪ್ಪಾಗಿ ಬರೆದ ಆರ್‌ಟಿಒ ಅಧಿಕಾರಿಗಳು|ಆರ್‌ಸಿ ಪ್ರತಿ ಕಡ್ಡಾಯ ಮಾಡಿದ ವಿಮಾ ಕಂಪನಿಗಳು| ಅವಧಿಗೂ ಮೊದಲೇ ಸಾಲ ಮರುಪಾವತಿಗೆ ಬ್ಯಾಂಕ್‌ಗಳಿಂದ ಹೆಚ್ಚುವರಿ ಬಡ್ಡಿ!

ಬೆಂಗಳೂರು[ಮಾ.04]: ವಿಮಾನ ಕಸರತ್ತು ಕಣ್ತುಂಬಿಸಿಕೊಳ್ಳಲು ವೈಮಾನಿಕ ಪ್ರದರ್ಶನಕ್ಕೆ (ಏರ್‌ಶೋ) ತೆರಳಿ ಅನಿರೀಕ್ಷಿತ ‘ಕಾರ್ಗಿಚ್ಚಿ’ನಿಂದ ಕಾರು ಕಳೆದುಕೊಂಡವರು ಸದ್ಯ ವಿಮೆಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ರೋಸಿ ಹೋಗಿದ್ದಾರೆ.

ಕಳೆದ ವಾರ ಏರ್‌ಶೋ ವಾಹನ ನಿಲುಗಡೆ ಸ್ಥಳದಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಒಟ್ಟು 277 ಕಾರುಗಳು ಸುಟ್ಟು ಭಸ್ಮವಾಗಿದ್ದವು. ಈ ದುರಂತದಿಂದಾಗಿ ತಮ್ಮದಲ್ಲದ ತಪ್ಪಿಗೆ ಅನೇಕರು ಕಷ್ಟಪಟ್ಟು ಸಂಪಾದಿಸಿದ್ದ ಕಾರು ಕಳೆದುಕೊಂಡರು. ಆದರೆ, ಸುಟ್ಟಕಾರಿಗೆ ಪರಿಹಾರ ರೂಪದಲ್ಲಿ ವಿಮೆ ಪಡೆಯಬಹುದು ಎಂಬ ನೆಮ್ಮದಿಯು ಮಾಲಿಕರ ಮನದಲ್ಲಿ ಮನೆ ಮಾಡಿತ್ತು.

ಅದೇ ಉದ್ದೇಶದಿಂದ ಕಾರು ಮಾಲಿಕರು ವಿಮೆ ಪಡೆಯಲು ಮುಂದಾಗಿದ್ದಾರೆ. ವಿಪರ್ಯಾಸವೋ ಅಥವಾ ಕೇಡುಗಾಲವೋ ಎಂಬಂತೆ ಸಾರಿಗೆ ಇಲಾಖೆಯ ಅಧಿಕಾರಿಗಳ ತಪ್ಪು ಹಾಗೂ ವಿಮಾ ಕಂಪನಿಗಳ ಷರತ್ತಿನಿಂದಾಗಿ ಕಾರು ಮಾಲಿಕರು ವಿಮಾ ಕಂಪನಿ, ಬ್ಯಾಂಕ್‌ಗಳಿಗೆ ಮತ್ತು ಆರ್‌ಟಿಒ ಕಚೇರಿಗೆ ನಿತ್ಯ ಅಲೆದಾಡುತ್ತಿದ್ದಾರೆ. ಪರಿಣಾಮ ಒಂದೆಡೆ ಕಾರು ಕಳೆದುಕೊಂಡು, ವಿಮಗೆಯೂ ಸಿಗದೆ ಮತ್ತು ಉದ್ಯೋಗಕ್ಕೂ ಹೋಗಲಾಗದೇ, ನೆಮ್ಮದಿ ಕಡೆಸಿಕೊಂಡು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ಅಗ್ನಿ ಅವಘಡ ಸಂಭವಿಸಿದ ಮರುದಿನವೇ ಸ್ಥಳದಕ್ಕೆ ಧಾವಿಸಿದ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ವಿಮಾ ಕಂಪನಿಗಳ ಪ್ರತಿನಿಧಿಗಳು, ಘಟನಾ ಸ್ಥಳದಲ್ಲಿಯೇ ಸಂಪರ್ಕ ಕೇಂದ್ರ ಆರಂಭಿಸಿ ಕಾರು ಕಳೆದುಕೊಂಡ ಮಾಲಿಕರಿಗೆ ಸಹಾಯ ಹಸ್ತ ಚಾಚುವುದಾಗಿ ಭರವಸೆ ನೀಡಿದ್ದವು. ಆದರೀಗ ನಿಯಮಗಳು ಹಾಗೂ ಷರತ್ತುಗಳನ್ನು ಮುಂದಿಟ್ಟು ಮೊದಲೇ ಕಾರು ಕಳೆದುಕೊಂಡು ನೋವಿನಲ್ಲಿರುವ ಮಾಲಿಕರಿಗೆ ಮತ್ತಷ್ಟುಸಂಕಷ್ಟನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಪ್ಪು ಮಾಹಿತಿ ನಮೂದಿಸಿದ ಆರ್‌ಟಿಒಗಳು:

ಏರ್‌ ಇಂಡಿಯಾ ನಡೆದ ಆವರಣದಲ್ಲಿ ಫೆ.23ರಂದು ಅಗ್ನಿ ಅವಘಡ ಸಂಭವಿಸಿದ ಮರುದಿನ ಬೆಳಗ್ಗೆ ನಗರದ ಎಲೆಕ್ಟ್ರಾನಿಕ್‌ ಸಿಟಿ, ರಾಜಾಜಿನಗರ, ಯಶವಂತಪುರ, ಜಯನಗರ, ಇಂದಿರಾ ನಗರ ಸೇರಿದಂತೆ ವಿವಿಧ ಆರ್‌ಟಿಒ ಕಚೇರಿ ಅಧಿಕಾರಿಗಳು ಒಗ್ಗೂಡಿ ಸುಟ್ಟಕಾರುಗಳನ್ನು ಮಹಜರ್‌ ಮಾಡಿದ್ದರು. ಈ ವೇಳೆ ಕೆಲ ಕಾರುಗಳ ಎಂಜಿನ್‌ ಹಾಗೂ ಚಾರ್ಸಿ ಸಂಖ್ಯೆಯನ್ನು ಮಹಜರ್‌ನಲ್ಲಿ ತಪ್ಪಾಗಿ ನಮೂದಿಸಿದ್ದಾರೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾರು ಮಾಲಿಕರು ಮಹಜರ್‌ ಮಾಡಿದ್ದ ವಿವಿಧ ಆರ್‌ಟಿಒಗಳ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಆದರೆ, ತಪ್ಪು ಸರಿಪಡಿಸಬೇಕಾದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹೆಚ್ಚುವರಿ ಕರ್ತವ್ಯದ ಮೇರೆಗೆ ಅಗ್ನಿ ದುರಂತ ನಡೆದ ಸ್ಥಳಕ್ಕೆ ಬಂದಿದ್ದೇವು. ಆ ಪ್ರದೇಶವು ಯಲಹಂಕ ಆರ್‌ಟಿಒ ವ್ಯಾಪ್ತಿಗೆ ಬರಲಿದೆ. ಸದ್ಯ ಎಂಜಿನ್‌ ಹಾಗೂ ಚಾರ್ಸಿ ಸಂಖ್ಯೆ ನಮೂದನೆಯಲ್ಲಿ ಆಗಿರುವ ತಪ್ಪು ಸರಿಪಡಿಸಲು ಈಗ ನಮಗೆ ಅಧಿಕಾರ ಇಲ್ಲ ಎಂದು ಬೇರೆ ವಲಯದ ಆರ್‌ಟಿಒಗಳು ಕಾರು ಮಾಲಿಕರಿಗೆ ಉತ್ತರ ನೀಡುತ್ತಿದ್ದಾರೆ. ಈ ಬೇಜವಾಬ್ದಾರಿಯ ಮಾತು ಕೇಳಿ ಕಾರು ಮಾಲಿಕರು ಕಂಗಾಲಾಗಿದ್ದಾರೆ.

ಕಂಗೆಡಿಸಿದ ವಿಮಾ ಕಂಪನಿಗಳ ಹೊಸ ಷರತ್ತು:

ಮತ್ತೊಂದೆಡೆ ವಿಮಾ ಕಂಪನಿಗಳು ವಿಧಿಸುತ್ತಿರುವ ಹೊಸ ಹೊಸ ಷರತ್ತುಗಳು ಕಾರು ಮಾಲಿಕರನ್ನು ಕಂಗೆಡಿಸುತ್ತಿವೆ. ವಿಮೆ ಪಡೆಯಲು ಆರ್‌ಸಿ ನೋಂದಣಿ ಮಾಹಿತಿ (ಆರ್‌ಸಿ ಎಕ್ಸ್‌ಟ್ರಾಕ್ಟ್) ನೀಡಿದರೆ ಸಾಕು ಎಂಬುದಾಗಿ ಮೊದಲಿಗೆ ಹೇಳಿದ್ದ ವಿಮಾ ಕಂಪನಿಗಳು ಸದ್ಯ ರಾಗ ಬದಲಿಸಿವೆ. ಆರ್‌ಸಿ ನಕಲು ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೊಸ ಷರತ್ತು ವಿಧಿಸುತ್ತಿವೆ. ಅವಘಡದಲ್ಲಿ ಕೆಲ ಕಾರುಗಳೊಂದಿಗೆ ಅವುಗಳಲ್ಲಿದ್ದ ಮೂಲ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಸಹ ಸುಟ್ಟು ಕರಕಲಾಗಿವೆ. ಇದರಿಂದ ಆರ್‌ಸಿ ನಕಲು ಪ್ರತಿಯನ್ನು ಆರ್‌ಟಿಒಯಿಂದ ಪಡೆಯುವುದು ಕಾರು ಮಾಲಿಕರಿಗೆ ಅನಿವಾರ್ಯವಾಗಿದೆ. ಆದರೆ, ಆರ್‌ಸಿ ನಕಲು ಪ್ರತಿ ಪಡೆಯಲು ಕನಿಷ್ಠ 30 ದಿನ ಬೇಕಿದೆ. ಪರಿಣಾಮ ವಿಮೆ ಪಡೆಯುವ ಪ್ರಕ್ರಿಯೆ ಆರಂಭವೇ ವಿಳಂಬವಾಗಲಿದೆ ಎಂದು ಕಾರು ಮಾಲಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಶೇ.6 ಹೆಚ್ಚುವರಿ ಬಡ್ಡಿ!

ಮೊದಲೇ ಕಾರು ಕಳೆದುಕೊಂಡು ಸಂಕಷ್ಟದಲ್ಲಿರುವ ಮಾಲಿಕರಿಗೆ ಬ್ಯಾಂಕ್‌ಗಳು ಗಾಯದ ಮೇಲೆ ಬರೆ ಎಳೆಯುವುದಕ್ಕೆ ಮುಂದಾಗಿವೆ. ಅವಘಡದಲ್ಲಿ ಸುಟ್ಟು ಹೋದ ಕಾರುಗಳನ್ನು ಅನೇಕರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕಾರು ಖರೀದಿದವರು. ಅವರಿಗೆ ವಿಮಾ ಕಂಪನಿಗಳಿಂದ ಪರಿಹಾರ ಪಡೆದು ಬ್ಯಾಂಕ್‌ ಸಾಲವನ್ನು ಅವಧಿಗೆ ಮುನ್ನವೇ ಪಾವತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅವಧಿಗೆ ಮುನ್ನವೇ ಸಾಲ ಮರುಪಾವತಿ ಮಾಡುವವರಿಗೆ ಕೆಲ ಬ್ಯಾಂಕ್‌ಗಳು ಶೇ.6ರಷ್ಟುಹೆಚ್ಚುವರಿ ಬಡ್ಡಿ ವಿಧಿಸುವುದಕ್ಕೆ ಮುಂದಾಗಿವೆ. ಇದರಿಂದ ತಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಘಟನೆಯಲ್ಲಿ ಕಾರು ಕಳೆದುಕೊಂಡು ಮಾಲಿಕರೊಬ್ಬರು ಅಹವಾಲು ತೋಡಿಕೊಳ್ಳುತ್ತಾರೆ.