ನವದೆಹಲಿ[ಜೂ.30]: ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್‌ ಅವರು ಜೈನ ಸಮುದಾಯದ ವ್ಯಕ್ತಿ ಜತೆ ವಿವಾಹವಾಗಿರುವ ಹಿನ್ನೆಲೆಯಲ್ಲಿ ಇಸ್ಲಾಮಿಕ್‌ ಸಂಸ್ಥೆ ದೇವಬಂದ್‌ ಫತ್ವಾ ಹೊರಡಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನುಸ್ರತ್‌ ಜಹಾನ್‌ ಬೆಂಬಲಕ್ಕೆ ನಿಂತಿರುವ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ, ಜೈನ ವ್ಯಕ್ತಿಯ ಜೊತೆಗಿನ ವಿವಾಹವನ್ನು ಸಮರ್ಥಿಸಿಕೊಂಡಿದ್ದಾರೆ. ಈ ವಿಷಯ ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಟಿಎಂಸಿ ಸಂಸದೆ ನುಸ್ರತ್ ಪ್ರಮಾಣ ವೇಳೆ ಜೈಹಿಂದ್, ವಂದೇಮಾತರಂ: ವೈರಲ್

ನುಸ್ರತ್‌ ಜಹಾನ್‌ ಜೈನ ವ್ಯಕ್ತಿಯ ಜೊತೆ ವಿವಾಹ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಸ್ಲಾಂ ಪ್ರಕಾರ, ಮುಸ್ಲಿಮರು ಮುಸ್ಲಿಮರನ್ನು ಮಾತ್ರ ವಿವಾಹ ಆಗಬೇಕು. ನುಸ್ರತ್‌ ಜಹಾನ್‌ ಒಬ್ಬ ನಟಿ. ಸಾಮಾನ್ಯವಾಗಿ ನಟರು ಧರ್ಮದ ಬಗ್ಗೆ ಯೋಚಿಸುವುದಿಲ್ಲ. ಅವರು ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಇದನ್ನು ಆಕೆ ಸಂಸತ್ತಿನಲ್ಲಿ ತೋರಿಸಿದ್ದಾಳೆ. ಹಣೆಗೆ ಸಿಂಧೂರ ಮತ್ತು ಮಂಗಳಸೂತ್ರ ಧರಿಸಿ ಸಂಸತ್ತಿಗೆ ಬಂದ ಮೇಲೆ ಇನ್ನೂ ಏನೇ ಮಾತನಾಡಿದರೂ ವ್ಯರ್ಥ. ನಾವು ಆಕೆಯ ಜೀವನದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಮೌಲ್ವಿ ಮುಫ್ತಿ ಅಸದ್‌ ವಾಸ್ಮಿ ಹೇಳಿಕೆ ನೀಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್

ನುಸ್ರತ್‌ ವಿವಾಹದ ವಿರುದ್ಧ ಫತ್ವಾ ಹೊರಡಿಸುರುವ ಮೌಲ್ವಿಗಳ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ, ಮೌಲ್ವಿಗಳ ಪ್ರಕಾರ ಮುಸ್ಲಿಂ ಮಹಿಳೆ ಹಿಂದು ಯುವಕನೊಬ್ಬನ ಜೊತೆ ವಿವಾಹ ಆದರೆ ಅದು ಇಸ್ಲಾಂ ವಿರುದ್ಧ. ಆದರೆ, ಮುಸ್ಲಿಂ ಯುವಕರು ಹಿಂದು ಯುವತಿಯರನ್ನು ಲವ್‌ ಜಿಹಾದ್‌ ಹೆಸರಿನಲ್ಲಿ ಬಲೆಗೆ ಬೀಳಿಸಿ ಬುರ್ಖಾ ಧರಿಸಲು ಹೇಳುವುದು ಸಮಂಜಸವೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಸಾಧ್ವಿ ಹೇಳಿಕೆಗೂ ಮೌಲ್ವಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಬಸಿರ್‌ಹಟ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದ ನುಸ್ರತ್‌ ಜಹಾನ್‌ ಜೂ.19ರಂದು ಟರ್ಕಿಯಲ್ಲಿ ಉದ್ಯಮಿ ನಿಖಿಲ್‌ ಜೈನ್‌ ಜೊತೆ ವಿವಾಹ ಆಗಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಜೂ.25ರಂದು ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದರು.