ಹವಾಲಾ ಕೇಸ್: ಏಳು ಮಂದಿ ಡಿಕೆಶಿ ಆಪ್ತರಿಗೂ ಈಗ ವಿಚಾರಣೆ ಸಂಕಷ್ಟ
ಆನ್‌ಲೈನ್‌ನಲ್ಲಿ 7 ಸಾಕ್ಷಿಗಳ ವಿಚಾರಣೆಗೆ ಇ.ಡಿ.ಗೆ ದಿಲ್ಲಿ ಹೈಕೋರ್ಟ್ ಸೂಚನೆ| ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ. ಬಂಧಿಸಿತ್ತು|
ನವದೆಹಲಿ(ಅ.10): ಹವಾಲಾ ಮೂಲಕ ಕೋಟ್ಯಂತರ ರು. ವರ್ಗಾವಣೆ ನಡೆಸಿದ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಏಳು ಮಂದಿ ಸಂಬಂಧಿಕರು ಹಾಗೂ ಆಪ್ತರಿಗೂ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಯ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಸಾಕ್ಷಿಗಳಾದ ಈ ಏಳು ಮಂದಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಂತೆ ಇ.ಡಿ.ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಇ.ಡಿ. ನೀಡಿದ್ದ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಅವರ ಆಪ್ತರು ಮತ್ತು ಸಂಬಂಧಿಗಳಾದ ರಾಜೇಶ್ ಎಚ್., ಗಂಗಾಸರನ್, ಜಯಶೀಲಾ, ಚಂದ್ರ ಜಿ., ಕೆ.ವಿ.ಲಕ್ಷ್ಮಮ್ಮ, ಮೀನಾಕ್ಷಿ ಹಾಗೂ ಹನುಮಂತಯ್ಯ ಜಿ. ಎಂಬುವರು ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು. ಶುಕ್ರವಾರ ಅವರ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಕರ್ನಾಟಕದಲ್ಲಿರುವ ಈ ಅರ್ಜಿದಾರರೂ ತನಿಖೆಗೆ ಒಳಪಟ್ಟರೆ ವಿಚಾರಣೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಕೊರೋನಾ ಇರುವುದರಿಂದ ಖುದ್ದಾಗಿ ಕರೆಸುವ ಬದಲು ಇ.ಡಿ. ತನಿಖಾಧಿಕಾರಿಗಳು ಇವರನ್ನು ವಿಡಿಯೋ ಕಾನ್ಛರೆನ್ಸ್‌ನಲ್ಲಿ ವಿಚಾರಣೆ ನಡೆಸಬೇಕು ಎಂದು ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮೋಹಿತ್ ಮಾಥುರ್, ಇವರು ಮುಖ್ಯ ಆರೋಪಿಯ ಸಂಬಂಧಿಕರು ಎಂಬ ಕಾರಣಕ್ಕೆ ಕಿರುಕುಳ ನೀಡಲೆಂದೇ ವಿಚಾರಣೆಗೆ ಕರೆಯಲಾಗಿದೆ. ಇದು ಸಿಆರ್‌ಪಿಸಿ ಕಲಂಗಳ ಉಲ್ಲಂಘನೆಯಾಗಿದೆ. ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ. ಆದರೆ, ಅವರನ್ನು ವಿಚಾರಣೆಗೆ ಕರೆಯುವ ಅಗತ್ಯವಿಲ್ಲ ಎಂದು ಹೇಳಿದರು.
'ಡಿ.ಕೆ. ಶಿವಕುಮಾರ ಮೇಲೆ FIR ದಾಖಲಿಸಿ ಜೈಲಿಗೆ ಅಟ್ಟಿ'
ಕೇಂದ್ರ ಸರ್ಕಾರದ ವಕೀಲ ಅಮಿತ್ ಮಹಾಜನ್ ಇ.ಡಿ. ಪರವಾಗಿ ವಾದ ಮಂಡಿಸಿ, ಅರ್ಜಿದಾರರಿಂದ ಈ ಮೊದಲೇ ಒಂದಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಿಗೆ ಸ್ಪಷ್ಟನೆಯ ಅಗತ್ಯವಿರುವುದರಿಂದ ವಿಚಾರಣೆಗೆ ಕರೆಯಬೇಕಾಗಿದೆ. ನ.19ರ ನಂತರ ಅವರನ್ನು ವಿಚಾರಣೆಗೆ ಕರೆಸುತ್ತೇವೆ ಎಂದು ಹೇಳಿದರು.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ. ಬಂಧಿಸಿತ್ತು. ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರದ ಆರೋಪದಡಿ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಆರೋಪಪಟ್ಟಿಯ ಆಧಾರದಲ್ಲಿ ಇ.ಡಿ. ಎಫ್‌ಐಆರ್ ದಾಖಲಿಸಿತ್ತು.