ವಾರಕ್ಕಿಷ್ಟು ಮೊಬೈಲ್ ಕಳ್ಳತನ ಮಾಡಿ: ಕಳ್ಳರಿಗೂ ಟಾರ್ಗೆಟ್!
ನವದೆಹಲಿ(ಜೂ.21): ಸಂಸ್ಥೆಗಳು, ಕಂಪೆನಿಗಳ ಅಧಿಕಾರಿಗಳು, ನೌಕರರಿಗೆ ಕೆಲವು ನಿರ್ದಿಷ್ಟ ಗುರಿ ನೀಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕ್ರಿಮಿನಲ್‌ಗಳಿಗೂ ಇಂತಹ ಗುರಿಯಿರುತ್ತದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಹೌದು, ದೆಹಲಿಯಲ್ಲಿ ಕೆಲವು ಕ್ರಿಮಿನಲ್‌ಗಳು ಬಾಲಾಪರಾಧಿಗಳನ್ನು ಬಳಸಿಕೊಂಡು, ಮೊಬೈಲ್ ಕಳ್ಳತನ ಜಾಲದಲ್ಲಿ ತೊಡಗಿದ್ದು, ವಾರದಲ್ಲಿ ಇಂತಿಷ್ಟು ಮೊಬೈಲ್‌ಗಳ ಕಳ್ಳತನ ನಡೆಸಬೇಕೆಂಬ ಗುರಿ ನಿಗದಿಪಡಿಸಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಸ್ಲಮ್ ಬಾಲಕರನ್ನು ಬಳಸಿಕೊಂಡು, ಹೊಸ ಕಾರ್ಯವಿಧಾನದ ಮೂಲಕ ಈ ಅಪರಾಧ ಎಸಗಲಾಗುತ್ತಿದೆ.
ಈ ಸಂಬಂಧ ಇಬ್ಬರು ಬಾಲಪರಾಧಿ ಆರೋಪಿಗಳನ್ನು ಬಂಧಿಸಿದ ಬಳಿಕ ಪೊಲೀಸರಿಗೆ ಇಂತಹ ಸಂಶಯ ಮೂಡಿದೆ. ವ್ಯಕ್ತಿಯೊಬ್ಬ ಹೇಳಿದಂತೆ, ಆತ ನೀಡಿದ ಗುರಿಯನ್ವಯ ಈ ಬಾಲಕರು ಕಳ್ಳತನ ನಡೆಸುತ್ತಾರೆ. ಅವರು ಕಳವುಗೈದ ಮೊಬೈಲ್ ಗುಣಮಟ್ಟ ಮತ್ತು ಎಷ್ಟು ಮೊಬೈಲ್ ಕದ್ದಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಅವರಿಗೆ ಹಣ ನೀಡಲಾಗುತ್ತದೆ ಎನ್ನಲಾಗಿದೆ. ಕಳವುಗೈದ ಮೊಬೈಲ್‌ಗಳನ್ನು ನೇಪಾಳ, ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ.
