ನವದೆಹಲಿ(ಮಾ.02): ತಮ್ಮ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶಾಂತಿಯ ಧೂತನಂತೆ ಪೋಸ್ ಕೊಡುತ್ತಿದ್ದಾರೆ.

ಇಮ್ರಾನ್ ಅವರ ಶಾಂತಿಧೂತನ ಗೆಟಪ್ನ್ನು ಭಾರತದಲ್ಲಿ ಕೆಲವೇ ಕೆಲವು ಜನ ನಂಬತೊಡಗಿದ್ದಾರೆ. ಅಲ್ಲದೇ ಪಾಕ್ ಸೇನೆ ಅಭಿನಂದನ್ ಅವರನ್ನು ನಡೆಸಿಕೊಂಡ ರೀತಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಆದರೆ ಇಮ್ರಾನ್ ಖಾನ್ ಅವರ ಈ ಶಾಂತಿಧೂತನ ಮುಖವಾಡವನ್ನು ಜನಪ್ರಿಯ ರಕ್ಷಣಾ ತಜ್ಞ ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ  ತಮ್ಮದೇ ರೀತಿಯಲ್ಲಿ ಬಯಲು ಮಾಡಿದ್ದಾರೆ.

ಓವರ್ ಟು ನಿತಿನ್ ಗೋಖಲೆ:

‘ಅಭಿನಂದನ್ ಅವರನ್ನು ಪಾಕ್ ಸೇನೆ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಸತ್ಯವೇ ಬೇರೆ ಇದೆ. ಅಸಲಿಗೆ ಅಭಿನಂದನ್ ಅವರನ್ನು ಯುದ್ಧ ಕೈದಿಗಳನ್ನು ಇಡುವ ಏಕಾಂಗಿ ಸೆಲ್ ನಲ್ಲಿ ಬಂಧಿಸಿ ಇರಿಸಲಾಗಿತ್ತು. ಅಲ್ಲದೇ ಈ ಸೆಲ್ ನಲ್ಲಿ ಟಿವಿ, ರೇಡಿಯೋ, ದೂರವಾಣಿ ಮತ್ತು ದಿನಪತ್ರಿಕೆಗಳನ್ನು ನಿಷೇಧಿಸಲಾಗಿತ್ತು.

ಇಷ್ಟೇ ಅಲ್ಲದೇ ತಮ್ಮನ್ನು ಬಿಡುಗಡೆ ಮಾಡುವ ಇಮ್ರಾನ್ ಖಾನ್ ನಿರ್ಧಾರದ ಕುರಿತು ಅಭಿನಂದನ್ ಅವರಿಗೆ ಮಾಹಿತಿಯೇ ಇರಲಿಲ್ಲ. ಅಲ್ಲದೇ ಅಭಿನಂದನ್ ಅವರಿಂದ ಒತ್ತಾಯಪೂರ್ವಕವಾಗಿ ಕೆಲವು ಹೇಳಿಕೆಗಳನ್ನು ಪಡೆದು ಅದನ್ನು ವಿಡಿಯೋ ಮಾಡಲಾಗಿದೆ.

ಇಷ್ಟೇಲ್ಲ ಆದರೂ ಅಭಿನಂದನ್ ಮಾತ್ರ ತಮ್ಮ ಸ್ವಾಬಿಮಾನ ಬಿಟ್ಟುಕೊಡದೇ ಪಾಕ್ ಸೈನಿಕರ ಒತ್ತಾಯದ ನಡುವೆಯೂ ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡದ ಧೈರ್ಯ ತೋರಿದ್ದಾರೆ.

ಈ ಎಲ್ಲ ಸತ್ಯಾಸತ್ಯತೆಗಳನ್ನು ಅಳೆದು ತೂಗಿದ ಮೇಲಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಶಾಂತಿ ಮಾತುಕತೆಯ ಮನವಿಯ ಕುರಿತು ಭಾರತೀಯರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇಮ್ರಾನ್ ಹೇಳಿದ ಮಾತ್ರಕ್ಕೆ ಅವರನ್ನು ನಂಬುವಷ್ಟು ಮುಗ್ಧರಲ್ಲ ಭಾರತೀಯರು’.