ಶಿರೂರು ಶ್ರೀಗಳ ನಿಧನದ ಬಳಿಕ ಸಾಕಷ್ಟು ವಿವಾದಗಳ ಕೇಂದ್ರ ಬಿಂದುವಾಗಿದ್ದ ಶೀರೂರು ಮಠವನ್ನು ಸೋಮವಾರ ದ್ವಂದ್ವ ಮಠಕ್ಕೆ ಹಸ್ತಾಂತರಿಸಲಾಗುತ್ತಿದೆ.
ಉಡುಪಿ: ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥರ ನಿಧನಕ್ಕೆ ಸಂಬಂಧಿಸಿ ತನಿಖೆ ಉದ್ದೇಶದಿಂದ ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದ ಉಡುಪಿಯ ರಥಬೀದಿಯ ಶಿರೂರು ಮಠದ ಸುಪರ್ದಿಯನ್ನು ಸೋಮವಾರ ದ್ವಂದ್ವ ಮಠವಾದ ಸೋದೆ ಮಠಕ್ಕೆ ಬಿಟ್ಟುಕೊಡಲಿದ್ದಾರೆ. ಆದರೆ, ಶಿರೂರು ಗ್ರಾಮದಲ್ಲಿರುವ ಮೂಲಮಠವು ಇನ್ನೂ ಕೆಲವು ದಿನಗಳ ಕಾಲ ಪೊಲೀಸ್ ಇಲಾಖೆಯ ಸುಪರ್ದಿಯಲ್ಲಿಯೇ ಮುಂದುವರಿಯಲಿದೆ.
ಶಿರೂರು ಶ್ರೀಗಳ ಸಮಾಧಿ ಇರುವ ಮೂಲಮಠವು ಪೊಲೀಸರ ವಶದಲ್ಲಿರುವುದರಿಂದ ಇದುವರೆಗೆ ಶ್ರೀಗಳ ಆರಾಧನೆ ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಪೊಲೀಸರು ಸದ್ಯವೇ ಈ ಮಠವನ್ನು ಬಿಟ್ಟುಕೊಡಲಿದ್ದು, ಕೂಡಲೇ ಶ್ರೀಗಳು ಆರಾಧನೆಯನ್ನು ನಡೆಸಲಾಗುವುದು ಎಂದು ಸೋದೆ ಮಠದ ದಿವಾಣರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಶ್ರೀಗಳು ನಿಧನರಾಗುವುದಕ್ಕೆ ಕೆಲವು ದಿನ ಮೊದಲು ನಡೆಸಲುದ್ದೇಶಿಸಿದ್ದ ವನಮಹೋತ್ಸವಕ್ಕೆ ತಂದಿಟ್ಟಿರುವ ಸಸಿಗಳನ್ನು ಈಗಾಗಲೇ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
