ಸಹೋದರನ ಅನಾರೋಗ್ಯದ ಕಾರಣ ಹೋಗಲಾಗಿಲ್ಲ ಎಂದು ಸ್ಪಷ್ಟನೆ ಬಿಜೆಪಿಯವರು ಐಫೋನ್ ಬಿಟ್ಟು ಬೇರೆ ವಿಚಾರದ ಬಗ್ಗೆ ಚರ್ಚಿಸಲಿ ಎಂದ ಡಿಸಿಎಂ
ಬೆಂಗಳೂರು[ಜು.18]: ನನ್ನ ಸಹೋದರನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವ ಕಾರಣ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಐ ಫೋನ್ ಕೊಟ್ಟ ವಿಚಾರ ನನಗೆ ಗೊತ್ತಿಲ್ಲ. ಸರ್ಕಾರದಿಂದ ಕೊಟ್ಟಿದ್ದಾರೋ ಅಥವಾ ಡಿಕೆಶಿ ಸ್ವಂತ ಖರ್ಚಿನಲ್ಲಿ ಕೊಟ್ಟಿದ್ದಾರೋ ಗೊತ್ತಿಲ್ಲ.ಅದೇನೂ ಚರ್ಚೆ ಮಾಡುವಂತಹಾ ಗಂಭೀರ ವಿಚಾರವಲ್ಲ. ಕಾವೇರಿ ವಿವಾದದಂತಹ ಗಂಭೀರ ವಿಚಾರಗಳಿವೆ. ಬಿಜೆಪಿಯವರು ಅಂತಹವುಗಳ ಬಗ್ಗೆ ಚರ್ಚೆ ಮಾಡಲಿ. ಅದರಿಂದ ರಾಜ್ಯಕ್ಕೂ ಒಳಿತಾಗುತ್ತೆ ಎಂದರು.
ಎಂ ಬಿ ಪಾಟೀಲ್ ಗೆ ಸೈಕಲ್ ರವಿ ನಂಟಿರುವ ಬಗ್ಗೆ ಮಾತನಾಡಿದ ಡಿಸಿಎಂ,ಇನ್ನೂ ಕೇಸ್ ತನಿಖೆ ಹಂತದಲ್ಲಿ ಇದೆ. ಎಂ.ಬಿ.ಪಾಟೀಲ್'ಗೆ ಸೈಕಲ್ ರವಿಗೂ ನಂಟಿನ ವಿಚಾರವೇ ಇಲ್ಲ ಅಂತಾ ಅಧಿಕಾರಿಗಳು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಮತ್ತವರ ತಂಡ ಹರಕೆ ಹೊತ್ತು ಕೊಂಡಿರುವ ಸಾಧ್ಯತೆಯ ಕಾರಣ ಜೈಪುರ ಪ್ರವಾಸಕ್ಕೆ ತೆರಳಲಿದ್ದಾರೆ. ಇದನ್ನು ಬಂಡಾಯ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಕೆಪಿಸಿಸಿ ಅದ್ಯಕ್ಷರಿಗೆ ಸಂಬಂಧಿಸಿದ ವಿಷಯ. ಬಹುಶಃ ಹೈಕಮಾಂಡ್ ದಿನೇಶ್ ಅವರ ಬಳಿ ವರದಿ ಕೇಳಿರಬಹುದು ಎಂದರು.
