ಬೆಂಗಳೂರು, [ಆ.20]:  ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿ ಇಂದು [ಮಂಗಳವಾರ] ಹೈಕಮಾಂಡ್ ಆದೇಶಿಸಿದೆ.ಈ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. 

ಇಂದು ಬೆಳಗ್ಗೆ ಸಚಿವ ಸಂಪುಟ ರಚನೆಯಾಗಿದ್ದು 17 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಇತ್ತು. ಇದೀಗ ನಳೀನ್​ಕುಮಾರ್​ ಕಟೀಲ್ ಅವರನ್ನು ಇಂದಿನಿಂದಲೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯ ಬಿಜೆಪಿಗೆ ಹೊಸ ಬಾಸ್: ಯಾರಿಗೆ ಪಟ್ಟ? ಲಿಂಬಾವಳಿಗೋ? ಕರಾವಳಿಗೋ?

ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್​.ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಸಮರ್ಥವಾಗಿ ಕಾರ್ಯ ನಿಭಾಯಿಸಿದ್ದರು. ಇದೀಗ ಈ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ನಳೀನ್​ ಕುಮಾರ್​ ಅವರ ಹೆಗಲಿಗೆ ಹಾಕಲಾಗಿದೆ.

ಸಂಪುಟದಲ್ಲಿ ಕರಾವಳಿಗೆ ಒಂದು ಸಚಿವ ಸ್ಥಾನ ಕೊಡದೇ ಅನ್ಯಾಯ ಮಾಡಿದ್ದರೂ, ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕೇಂದ್ರದ ನಾಯಕರು ಸಿಹಿ ಸುದ್ದಿ ನೀಡಿದ್ದಾರೆ.

ಮೊದಲಿಗೆ ರಾಜ್ಯಾಧ್ಯಕ್ಷ ಹುದ್ದೆಗೆ ಸಿ.ಟಿ ರವಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ ಇವರಿಗೆ ಮಂತ್ರಿ ಸ್ಥಾನ ನೀಡಿದ್ದರಿಂದ. ಮತ್ತೋರ್ವ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಸಂಪುಟದಲ್ಲಿ ಮಂತ್ರಿಸ್ಥಾನ ನೀಡದಿರುವುದರಿಂದ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬಹುದು ಎನ್ನಲಾಗಿತ್ತು. 

2009ರಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ನಳೀನ್ ಕುಮಾರ್, 2011ರ ಲೋಕಸಭಾ ಚುನಾವಣೆಯಲ್ಲೂ ಸಹ ಗೆಲುವು ಸಾಧಿಸುವ ಮೂಲಕ 2ನೇ ಬಾರಿಗೆ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಮೊನ್ನೆ 2019ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.