ಮುಂಬೈ[ಫೆ.07]: ಬಿಟ್‌ಕಾಯಿನ್‌ ಮುಂತಾದ ಕ್ರಿಪ್ಟೋಕರೆನ್ಸಿ (ಅಧಿಕೃತವಲ್ಲದ ಆನ್‌ಲೈನ್‌ ಹಣ)ಯಲ್ಲಿ ವ್ಯವಹಾರ ನಡೆಸುವವರಿಗೆ ಏನೇನು ಸಮಸ್ಯೆಗಳಾಗಬಹುದು ಎಂಬುದಕ್ಕೆ ಇನ್ನೊಂದು ತಾಜಾ ಉದಾಹರಣೆ ದೊರೆತಿದೆ. ಕೆನಡಾ ಮೂಲದ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ ಕಂಪನಿಯ ಸಿಇಒ ಒಬ್ಬ ಭಾರತಕ್ಕೆ ಬಂದಾಗ ಸಾವನ್ನಪ್ಪಿದ್ದು, ಆ ಕಂಪನಿಯಲ್ಲಿರುವ ಹಣದ ವ್ಯಾಲೆಟ್‌ನ ಪಾಸ್‌ವರ್ಡ್‌ ಆತನ ಬಳಿ ಮಾತ್ರ ಇದೆ! ಹೀಗಾಗಿ ಕಂಪನಿಯಲ್ಲಿ ಸುಮಾರು 1750 ಕೋಟಿ ರು. (250 ಮಿಲಿಯನ್‌ ಡಾಲರ್‌) ಹಣ ಹೊಂದಿರುವ 1.1 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹಣ ವಾಪಸ್‌ ಸಿಗದೆ ಕಂಗಾಲಾಗಿದ್ದಾರೆ.

2013ರಲ್ಲಿ ಕೆನಡಾದಲ್ಲಿ ಕ್ವಾಡ್ರಿಗಾಸಿಎಕ್ಸ್‌ ಎಂಬ ಕ್ರಿಪ್ಟೋಕರೆನ್ಸಿ ಕಂಪನಿಯೊಂದು ಹುಟ್ಟಿಕೊಂಡಿದೆ. ಜಗತ್ತಿನಲ್ಲಿ ಹೆಚ್ಚು ಕ್ರಿಪ್ಟೋಕರೆನ್ಸಿಯ ವಹಿವಾಟು ನಡೆಸುವ 237 ಪ್ರಮುಖ ಕಂಪನಿಗಳಲ್ಲಿ ಇದೂ ಒಂದು. ಇದನ್ನು ಹುಟ್ಟುಹಾಕಿದವನು ಗೆರಾಲ್ಡ್‌ ಕಾಟನ್‌ ಎಂಬ ಯುವಕ. 30 ವರ್ಷದ ಪ್ರಾಯದವನಾಗಿರುವ ಈತ ಇತ್ತೀಚೆಗೆ ಸಾವನ್ನಪ್ಪಿದ್ದಾನೆ. ಆದರೆ, ಕಂಪನಿಯ ಹಣದ ಹೂಡಿಕೆಯ ವಿವರಗಳಿರುವ ಮತ್ತು ಹಣ ಮರುಪಾವತಿ ಮಾಡಲು ಸಾಧ್ಯವಿರುವ ಎಲೆಕ್ಟ್ರಾನಿಕ್‌ ವಾಲ್ಟ್‌ನ ಕೀ (ಪಾಸ್‌ವರ್ಡ್‌) ಗೆರಾಲ್ಡ್‌ ಬಳಿ ಮಾತ್ರ ಇದೆ, ಹೀಗಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಈತನ ಪತ್ನಿ ಕೆನಡಾದ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾಳೆ.

ಭಾರತಕ್ಕೆ ಬಂದಾಗ ಸಾವು:

ಗೆರಾಲ್ಡ್‌ ಕಾಟನ್‌ ಡಿ.9ರಂದು ರಾಜಸ್ಥಾನದ ಜೈಪುರದಲ್ಲಿ ಅನಾಥಾಶ್ರಮವೊಂದನ್ನು ಆರಂಭಿಸಲು ಬಂದಾಗ ಕ್ರೋಹನ್‌ ಎಂಬ ಅಪರೂಪದ ಕಾಯಿಲೆಯಿಂದ (ತೀವ್ರತರ ಹೊಟ್ಟೆನೋವು) ಮೃತಪಟ್ಟಿದ್ದಾನಂತೆ. ಹೀಗೆಂದು ಆತನ ಕಂಪನಿ ಜ.14ರಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆತನ ಹೆಂಡತಿ ಜೆನಿಫರ್‌ ರಾಬರ್ಟ್‌ಸನ್‌, ‘ಗೆರಾಲ್ಡ್‌ ನಮ್ಮ ಮನೆಯಿಂದಲೇ ಎನ್‌ಕ್ರಿಪ್ಟೆಡ್‌ ಲ್ಯಾಪ್‌ಟಾಪ್‌ ಮೂಲಕ ಕಂಪನಿ ನಡೆಸುತ್ತಿದ್ದ. ನನಗೆ ಕಂಪನಿಯ ಹಣಕಾಸು ವಹಿವಾಟಿನ ಪಾಸ್‌ವರ್ಡ್‌ ಗೊತ್ತಿಲ್ಲ. ಮನೆಯಿಡೀ ಹುಡುಕಿದರೂ ಅದು ಸಿಕ್ಕಿಲ್ಲ’ ಎಂದು ತಿಳಿಸಿದ್ದಾಳೆ.

ಕ್ವಾಡ್ರಿಗಾಸಿಎಕ್ಸ್‌ ಕಂಪನಿಯ ಮನವಿಯ ಮೇರೆಗೆ ಅರ್ನೆಸ್ಟ್‌ ಅಂಡ್‌ ಯಂಗ್‌ ಎಂಬ ಅಕೌಂಟಿಂಗ್‌ ಕಂಪನಿಯು ಹಣದ ವಿವರ ಹಾಗೂ ಮೂಲವನ್ನು ಪತ್ತೆಹಚ್ಚುವ ಕಾಯಕದಲ್ಲಿ ತೊಡಗಿದೆ. ಹೀಗಾಗಿ ಕೋರ್ಟ್‌ 30 ದಿನಗಳ ಕಾಲ ಕಂಪನಿಗೆ ಹೂಡಿಕೆದಾರರಿಂದ ರಕ್ಷಣೆ ಒದಗಿಸಿದೆ.

ಇನ್ನೊಂದೆಡೆ ಕೆಲ ಹೂಡಿಕೆದಾರರು ಸಿಇಒ ಗೆರಾಲ್ಡ್‌ ಸತ್ತಿರುವುದೇ ಸುಳ್ಳಿರಬಹುದು, ನಮ್ಮ ಹಣ ಲಪಟಾಯಿಸಲು ಆತ ನಾಟಕವಾಡುತ್ತಿರಬಹುದು ಎಂದು ಆರೋಪಿಸಿದ್ದಾರೆ. ಇನ್ನು, ಆತನ ಹೆಂಡತಿಗೆ ಪಾಸ್‌ವರ್ಡ್‌ ಗೊತ್ತಿದ್ದೂ ಆಕೆ ನಾಟಕವಾಡುತ್ತಿರಬಹುದು ಎಂದೂ ಹೇಳಲಾಗುತ್ತಿದೆ.

ಸಮಸ್ಯೆ ಆಗಿರುವುದು ಎಲ್ಲಿ?

ಕ್ರಿಪ್ಟೋಕರೆನ್ಸಿಯ ವಹಿವಾಟು ನಿಗೂಢವಾಗಿ ನಡೆಯುತ್ತದೆ. ಅದರ ಮೇಲೆ ಕ್ರಿಪ್ಟೋಕರೆನ್ಸಿ ಕಂಪನಿಯನ್ನು ಹೊರತುಪಡಿಸಿ ಇನ್ನಾರಿಗೂ ಹಿಡಿತವಿರುವುದಿಲ್ಲ. ಆದರೂ ಈ ಕಂಪನಿಗಳು ಗ್ರಾಹಕರ ಹಣಕ್ಕೆ ಸಾಕಷ್ಟುಭದ್ರತೆ ಒದಗಿಸಿರುವುದಾಗಿ ಹೇಳಿಕೊಳ್ಳುತ್ತವೆ ಮತ್ತು ಕಂಪನಿಯೊಳಗಿನ ವ್ಯವಹಾರ ಒಬ್ಬನೇ ವ್ಯಕ್ತಿಯನ್ನು ಅವಲಂಬಿಸಿರುವುದಿಲ್ಲ. ಆದರೆ ಕ್ವಾಡ್ರಿಗಾಸಿಎಕ್ಸ್‌ ಕಂಪನಿಯಲ್ಲಿ ಸಿಇಒ ಒಬ್ಬನೇ ಎಲ್ಲ ಮಾಹಿತಿಯನ್ನು ಇರಿಸಿಕೊಂಡು ಸತ್ತುಹೋಗಿರುವುದು ಸಮಸ್ಯೆಯಾಗಿದೆ.

ಕ್ವಾಡ್ರಿಗಾಸಿಎಕ್ಸ್‌ ಕಂಪನಿಯಲ್ಲಿ ಹಾಟ್‌ ವ್ಯಾಲೆಟ್‌ ಹಾಗೂ ಕೋಲ್ಡ್‌ ವ್ಯಾಲೆಟ್‌ ಎಂಬ ಎರಡು ಖಾತೆಗಳಿವೆ. ಗ್ರಾಹಕರು ಹಾಟ್‌ ವ್ಯಾಲೆಟ್‌ನಲ್ಲಿ ನೇರವಾಗಿ ಹಣ ಹಾಕುವುದು ಹಾಗೂ ವಿತ್‌ಡ್ರಾ ಮಾಡುವುದನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಆದರೆ, ಕೋಲ್ಡ್‌ ವ್ಯಾಲೆಟ್‌ನಲ್ಲಿರುವ ಗ್ರಾಹಕರ ಹಣದ ಪಾಸ್‌ವರ್ಡ್‌ ಸಿಇಒ ಬಳಿ ಮಾತ್ರ ಇದ್ದು, ಅದನ್ನು ಗ್ರಾಹಕರು ಬಳಸಲು ಸಾಧ್ಯವಿಲ್ಲ. ಈಗ ಈ ಕೋಲ್ಡ್‌ ವ್ಯಾಲೆಟ್‌ನಲ್ಲಿರುವ 1750 ಕೋಟಿ ರು. ಹೊರತೆಗೆಯುವುದು ಹೇಗೆಂಬುದು ಯಾರಿಗೂ ತಿಳಿಯುತ್ತಿಲ್ಲ.