ಭುವನೇಶ್ವರ[ಸೆ.15]: ಒಡಿಶಾದ ದಟ್ಟಾರಣ್ಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 70ರ ಅಜ್ಜಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ[CRPF] ಜವಾನರು ರಕ್ಷಿಸಿದ್ದಾರೆ. ಸದ್ಯ ವೃದ್ಧ ಮಹಿಳೆಯನ್ನು ನೌಪಾಡಾ ಜಿಲ್ಲೆಯ ಲೋದ್ರಾ ಹಳ್ಳಿಯಲ್ಲಿರುವ ಆಕೆಯ ಮನೆಗೆ ಕರೆದೊಯ್ಯಲಾಗಿದೆ.

ಕುಟುಂಬ ಸದಸ್ಯರ ಮೇಲೆ ಮುನಿಸಿಕೊಂಡಿದ್ದ ವೃದ್ಧೆ ಮಂಗಳಾ ಬಾಯಿ ನೌಪಾಡಾ ಜಿಲ್ಲೆಯ ಲೋದ್ರಾ ಹಳ್ಳಿಯಲ್ಲಿರುವ ಮನೆಯನ್ನು ಬಿಟ್ಟು ತೆರಳಿದ್ದರು. ಎಡಬಿಡದೆ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಸತತ ಮೂರು ದಿನ ಕಾಡಿನಲ್ಲಿದ್ದ ಮಂಗಳಾ ಬಾಯಿಗಾಗಿ ಆಕೆಯ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಅವರು ಅಷ್ಟು ದಟ್ಟಾರಣ್ಯದ ನಡುವೆ ಹೋಗಿದ್ದಾದರೂ ಹೇಗೆ ಎಂಬುವುದು ಕುಟುಂಬಸ್ಥರಿಗೆ ಇನ್ನೂ ಪ್ರಶ್ನೆಯಾಗಿದೆ.

ಹಾವು ಕಡಿದ ವ್ಯಕ್ತಿಯ 2.5 ಕಿ.ಮಿ ಹೊತ್ತು ಸಾಹಸ ಮೆರೆದ ಯೋಧರು!

ತೀವ್ರ ಹುಡುಕಾಟ ನಡೆಸಿದರೂ ಅಜ್ಜಿ ಕಾಣದಾಗ ಕುಟುಂಬಸ್ಥರೂ ಹೆದರಿದ್ದಾರೆ. ಇನ್ನು ಅಜ್ಜಿ ಕಾಡಿನತ್ತ ತೆರಳಿದ್ದಾರೆ, ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕ ಕೂಡಲೇ CRPF ಜವಾನರು ರಕ್ಷಣಾ ಕಾರ್ಯಕ್ಕಿಳಿದಿದ್ದಾರೆ. ದಟ್ಟಾರಣ್ಯಕ್ಕೆ ತೆರಳಿದ CRPF ಜವಾನರು, ಅಜ್ಜಿಯನ್ನು ಪತ್ತೆ ಹಚ್ಚಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ಕಾಡಿನಿಂದ ಸುರಕ್ಷಿತವಾಗಿ ಕರೆ ತಂದಿದ್ದಾರೆ. 

ನಡೆಯಲು ಕಷ್ಟಪಡುತ್ತಿದ್ದ ಅಜ್ಜಿಯನ್ನು ಕಾಡಿನಿಂದ ಆಕೆಯ ಮನೆಯವರೆಗೂ ಹೊತ್ತುಕೊಂಡೇ ಬಂದ CRPF ಜವಾನರು, ಆಕೆಯನ್ನು ಕುಟುಂಬಸ್ಥರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಸದ್ಯ CRPF ಯೋಧರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ನೀನಿದ್ದರಿಲ್ಲ ಆಪತ್ತು: ಪಾರ್ಶ್ವವಾಯು ಪೀಡಿತ ಮಗುವಿಗೆ ಪುಲ್ವಾಮಾ ಚಾಲಕನ ಕೈ ತುತ್ತು!