ಶ್ರೀನಗರ[ಮೇ.14]: ಶ್ರೀನಗರದಲ್ಲಿರುವ CRPF ಹವಾಲ್ದಾರ್ ಇಕ್ಬಾಲ್ ಸಿಂಗ್ ತನಗೆ ನೀಡಿದ್ದ ಊಟವನ್ನು ಓರ್ವ ಪಾರ್ಶ್ವವಾಯು ಪೀಡಿತ ಬಾಲಕನಿಗೆ ತಿನ್ನಿಸುತ್ತಿರುವ ಮನಕಲುಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಯೋಧ ಇಕ್ಬಾಲ್ ಸಿಂಗ್ ರವರ ಈ ಮಾನವೀಯ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇಕ್ಬಾಲ್ ರನ್ನು ಕರೆಸಿಕೊಂಡ ಮಹಾನಿರ್ದೇಶಕರು ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. 

ಇಕ್ಬಾಲ್ ಸಿಂಗ್ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ್ದ ದಾಳಿಯ ವೇಳೆ CRPF ಯೋಧರಿದ್ದ ಒಂದು ವಾಹನವನ್ನು ಚಲಾಯಿಸುತ್ತಿದ್ದರು ಎಂಬುವುದು ಉಲ್ಲೇಖನೀಯ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ 49ಬೇ ಬೆಟಾಲಿಯನ್ ಚಾಲಕ CRPF ಜವಾನ ಇಕ್ಬಾಲ್ ಸಿಂಗ್, ಮುಚ್ಚಿದ ಅಂಗಡಿಯೆದುರು ಮೆಟ್ಟಿಲುಗಳ ಮೇಲೆ ಕುಳಿತಿದ್ದ ಪುಟ್ಟ ಬಾಲಕನಿಗೆ ಊಟ ತಿನ್ನಿಸುತ್ತಿರುವುದನ್ನು ನೋಡಬಹುದು. 

ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸಲು ನೇಮಕಗೊಂಡಿರುವ ಇಕ್ಬಾಲ್ ಸಿಂಗ್ ಘಟನೆಯ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ನಾನು ಮಧ್ಯಾಹ್ನದ ಊಟ ಸೇವಿಸುತ್ತಿದ್ದೆ. ಅದೇ ವೇಳೆ ಹಸಿವಿನಿಂದ ಕುಳಿತಿದ್ದ ಬಾಲಕನನ್ನು ನೋಡಿದೆ. ಆತನನ್ನು ನೋಡಿ ಬಹಳ ನೋವಾಯ್ತು ಹೀಗಾಗಿ ನನ್ನ ಊಟವನ್ನು ಬಾಲಕನಿಗೆ ನೀಡಿದೆ. ಆದರೆ ಪಾರ್ಶ್ವವಾಯು ಪೀಡಿತನಾಗಿದ್ದ ಆತನಿಗೆ ಊಟ ಮಾಡಲು ಆಗಲಿಲ್ಲ. ಹೀಗಾಗಿ ನಾನೇ ಆತನಿಗೆ ಊಟ ಮಾಡಿಸಿ, ನೀರು ಕೊಟ್ಟೆ. ಆ ವೇಳೆ ವಿಡಿಯೋ ಚಿತ್ರೀಕರಿಸಿದ್ದಾರೆ' ಎಂದಿದ್ದಾರೆ.

ಶ್ರೀನಗರ ಸೆಕ್ಟರ್ CRPF ಈ ವಿಡಿಯೋ ಟ್ವೀಟ್ ಮಾಡುತ್ತಾ 'ಮಾನವೀಯತೆ ಎಲ್ಲಾ ಧರ್ಮಗಳ ತಾಯಿ. CRPF ಶ್ರೀನಗರ ಸೆಕ್ಟರ್ ನ  49ನೇ ಬೆಟಾಲಿಯನ್ ನ ಹೆಡ್ ಕಾನ್ಸ್ಟೇಬಲ್ ಡ್ರೈವರ್ ಇಕ್ಬಾಲ್ ಸಿಂಗ್ ನವಾಕಾದಲ್ ಪ್ರದೇಶದಲ್ಲಿ LO ಡ್ಯೂಟಿಯಲ್ಲಿದ್ದರು. ಈ ವೇಳೆ  ಪಾರ್ಶ್ವವಾಯು ಪೀಡಿತ ಕಾಶ್ಮೀರಿ ಬಾಲಕನಿಗೆ ಊಟ ತಿನ್ನಿಸಿದ್ದಾರೆ. ಕೊನೆಗೆ ನೀರು ಬೇಕೇ ಎಂದು ಪ್ರಶ್ನಿಸಿದ್ದಾರೆ. ಶೌರ್ಯ ಮತ್ತು ಸಹಾನುಭೂತಿ ಒಂದೇ ನಾಣ್ಯದ ಎರಡು ಮುಖಗಳು' ಎಂದು ಬರೆದಿದ್ದಾರೆ.

ಈ ವಿಡಿಯೋವನ್ನು CRPF ರೀಟ್ವೀಟ್ ಮಾಡುತ್ತಾ 'ಮನುಷ್ಯರನ್ನು ಮನುಷ್ಯರನ್ನಾಗಿಸುವ ಧರ್ಮವನ್ನು ಪಾಲಿಸಬೇಕು' ಎನ್ನುವ ಶ್ರೀ ಗೋಪಾಲದಾಸ್ ನೀರಜ್ ರವರ ಮಾತನ್ನು ಬರೆದಿದ್ದಾರೆ.