ನವದೆಹಲಿ: ಕೃಷಿ ವಿಮಾ ಯೋಜನೆಗಳು ಖಾಸಗಿ ಕಂಪನಿಗಳಿಗೇ ಹೆಚ್ಚು ಲಾಭ ತರುವಂತಿವೆ ಎಂಬ ವಿಪಕ್ಷಗಳ ಆರೋಪದ ನಡುವೆಯೇ, 2018ರ ಮಾರ್ಚ್‌ಗೆ ಮುಕ್ತಾಯಗೊಂಡ ಹಣ ಕಾಸು ವರ್ಷದಲ್ಲಿ 11 ಖಾಸಗಿ ವಿಮಾ ಕಂಪನಿಗಳು 3000 ಕೋಟಿ ಲಾಭ ದತ್ತ ಮುಖಮಾಡಿವೆ. ಆದರೆ ಅಚ್ಚರಿ ಎಂಬಂತೆ ಇದೇ ವೇಳೆ 5 ಸರ್ಕಾರಿ ವಿಮಾ ಕಂಪನಿಗಳು 4000 ಕೋಟಿ  ನಷ್ಟದತ್ತ ಮುಖಮಾಡಿವೆ. 

ಇದು ಕೃಷಿ ವಿಮೆ ವಲಯವನ್ನು ಸರ್ಕಾರ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಂಚುವ ರೀತಿಯ ಬಗ್ಗೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೊತೆಗೆ ವಿಕೋಪದ ಸಂದರ್ಭದಲ್ಲಿ ರೈತರನ್ನು ಸಂಕಷ್ಟದಿಂದ ಕಾಪಾಡುವ ಉದ್ದೇಶ ಹೊಂದಿದ್ದ ವಿಮಾ ಯೋಜನೆಯ ಮೂಲ ಉದ್ದೇಶವೇ ಮಣ್ಣುಪಾಲಾದ ಕಳವಳವನ್ನೂ ಹುಟ್ಟುಹಾಕಿದೆ. 

ಅಲ್ಲದೆ ರೈತರ ಹೆಸರಿನಲ್ಲಿ ಸರ್ಕಾರ ಪಾವತಿಸುವ ಸಾವಿರಾರು ಕೋಟಿ ರು. ಹಣ ಖಾಸಗಿ ಕಂಪನಿಗಳ ಬೊಕ್ಕಸ ಸೇರುತ್ತಿರುವ ಬಗ್ಗೆ ಟೀಕೆಗೂ ಕಾರಣವಾಗಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಅನ್ವಯ, 2018 ರ ಮಾರ್ಚ್‌ಗೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ 11 ಖಾಸಗಿ ವಿಮಾ ಕಂಪನಿಗಳು ಒಟ್ಟಾರೆ 11509 ಕೋಟಿ ರು.ಗಳಷ್ಟು ಹಣವನ್ನು ಬೆಳೆ ವಿಮಾ ಯೋಜನೆಯ ಪ್ರೀಮಿಯಂ ರೂಪದಲ್ಲಿ ಸಂಗ್ರಹಿಸಿದ್ದವು. 

ಆದರೆ ಈ ಅವಧಿಯಲ್ಲಿ ನಾನಾ ಕಾರಣಗಳಿಗೆ ನಷ್ಟ ಅನುಭವಿಸಿದ ರೈತರು 8831 ಕೋಟಿ ರು. ವಿಮಾ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಅಂದರೆ ಸಂಗ್ರಹವಾದ ಪ್ರೀಮಿಯಂಗೂ, ಪಾವತಿಸಿಬೇಕಾದ ವಿಮಾ ಮೊತ್ತಕ್ಕೂ3000 ಕೋಟಿ ರು. ವ್ಯತ್ಯಾಸ. ಈ ವ್ಯತ್ಯಾದ ಹಣವೇ ಅವುಗಳ ಲಾಭ. ಅಚ್ಚರಿಯೆಂದರೆ 2017ರಲ್ಲಿ ಇದೇ ಖಾಸಗಿ ಕಂಪನಿಗಳು 4085 ಕೋಟಿ ರು. ನಷ್ಟ ಅನುಭವಿಸಿದ್ದವು. 

ಇನ್ನು 2018 ರಲ್ಲಿ 5 ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು 13411 ಕೋಟಿ ರು. ಪ್ರೀಮಿಯಂ ಸಂಗ್ರಹಿಸಿದ್ದರೆ, ರೈತರು 17496 ಕೋಟಿ ರು. ವಿಮೆ ಕ್ಲೇಮ್‌ಗೆ ಬೇಡಿಕೆ ಸಲ್ಲಿಸಿದ್ದಾರೆ. ಅಂದರೆ ಸರ್ಕಾರಿ ಕಂಪನಿಗಳಿಗೆ ಅಂದಾಜು 4000 ಕೋಟಿ ರು. ನಷ್ಟ ಖಚಿತ. ಸರ್ಕಾರಿ ಕಂಪನಿಗಳು ತಾವು ಮಾಡಿಸಿದ ವಿಮೆಯಿಂದ ತಮಗೆ ನಷ್ಟವಾಗದೇ ಇರಲಿ ಎನ್ನುವ ಕಾರಣಕ್ಕೆ ಮರುವಿಮೆ ಪಾಲಿಸಿ ತೆಗೆದುಕೊಂಡಿರುತ್ತವೆ. 

ಇದರ ಮೂಲಕ ಸರ್ಕಾರಿ ಕಂಪನಿಗಳು ನಷ್ಟದ ಹಣವನ್ನು ಭರಿಸಬಹುದಾಗಿದೆಯಾದರೂ, ಅವು ಮರು ವಿಮೆ ಮಾಡಿಸಿರುವುದು ಮತ್ತೊಂದು ಸರ್ಕಾರಿ ಸ್ವಾಮ್ಯದ ಜನರಲ್ ಇನ್ಷೂರೆನ್ಸ್ ಕಂಪನಿ ಬಳಿ. ಹೀಗಾಗಿ ಒಂದಲ್ಲಾ ಒಂದು ಸರ್ಕಾರಿ ಕಂಪನಿಗೆ ನಷ್ಟ ಖಚಿತ. ಸರ್ಕಾರಕ್ಕೆ ಹೊರೆ: ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಲಸ್ ವಿಮಾ ಯೋಜನೆ ಮತ್ತು ಹವಾಮಾನ ಆಧರಿತ ಬೆಳೆ ವಿಮೆ ಎಂಬ ಎರಡು ಯೋಜನೆ ಹೊಂದಿವೆ. ಈ ಪೈಕಿ ಎರಡೂ ವಿಮಾ ಯೋಜನೆಗಳ ಶೇ.೯೮ರಷ್ಟು ಪ್ರೀಮಿಯಂ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸಿದರೆ, ಶೇ.2 ರಷ್ಟು ಹಣವನ್ನು ರೈತರು ಪಾವತಿ ಮಾಡಬೇಕಾಗು ತ್ತದೆ. ಹೀಗಾಗಿ ಖಾಸಗಿ ಕಂಪನಿಗಳ ಲಾಭಕ್ಕೆ ಕಾರಣವಾದ ಹಣ ಸರ್ಕಾರದ ಬೊಕ್ಕಸದಿಂದಲೇ ಪಾವತಿಯಾಗಿರುತ್ತದೆ. 

ಇನ್ನಷ್ಟು ಲಾಭ: ಸದ್ಯ ಪ್ರಾಧಿಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು, ರೈತರಿಗೆ ಸಲ್ಲಿಕೆಯಾದ ಕ್ಲೇಮ್‌ಗಳ ಮಾಹಿತಿ. ಬಹುತೇಕ ಸಂದರ್ಭಗಳಲ್ಲಿ ಕೋರಿಕೆಯಾದ ಕ್ಲೇಮ್‌ನ ಅಷ್ಟೂ ಹಣವನ್ನು ವಿಮಾ ಕಂಪನಿಗಳು ಪಾವತಿಸುವುದಿಲ್ಲ. ಹೀಗಾಗಿ ಅವುಗಳ ಲಾಭ 3000 ಕೋಟಿ ರು.ಗಿಂತಲೂ ಹೆಚ್ಚಾಗುವುದು ಖಚಿತ ಎನ್ನಲಾಗಿದೆ. 2018 ನೇ ಸಾಲಿನಲ್ಲಿ 2 ವಿಮಾ ಯೋಜನೆಗಳ ಮೂಲಕ 47 ಕೋಟಿ ರೈತರು ವಿಮೆ ಪಡೆದುಕೊಂಡಿದ್ದರು. ಇದಕ್ಕಾಗಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ 26050  ಕೋಟಿ ರು. ಪ್ರೀಮಿಯಂ ಪಾವತಿಯಾಗಿದೆ. ಈ ಪೈಕಿ 25291 ಕೋಟಿ ರು.ಹಣಕ್ಕೆ ರೈತರು ಕ್ಲೇಮ್ ಸಲ್ಲಿಸಿದ್ದಾರೆ.