ಗುಕೇಶ್ ಕಲಿತ ಶಾಲೆಯ ನೂರಾರು ವಿದ್ಯಾರ್ಥಿಗಳು, ಗುಕೇಶ್ ತಾಯಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳು ಯುವ ಚೆಸ್ ತಾರೆಯನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಶಾಲಾ ವಿದ್ಯಾರ್ಥಿಗಳು ಗುಕೇಶ್‌ರ ಮುಖವಾಡ ಧರಿಸಿದ್ದು ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಚೆನ್ನೈ: ಕೆನಡಾದ ಟೊರೊಂಟೊ ನಗರದಲ್ಲಿ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದ ಗ್ರಾಂಡ್‌ಮಾಸ್ಟರ್ ಡಿ.ಗುಕೇಶ್ ಗುರುವಾರ ಮುಂಜಾನೆ 3 ಗಂಟೆಗೆ ತಮ್ಮ ಹುಟ್ಟೂರು ಚೆನ್ನೈಗೆ ಆಗಮಿಸಿದ್ದು, ಅದ್ಧೂರಿ ಸ್ವಾಗತ ಕೋರಲಾಯಿತು.
ಗುಕೇಶ್ ಕಲಿತ ಶಾಲೆಯ ನೂರಾರು ವಿದ್ಯಾರ್ಥಿಗಳು, ಗುಕೇಶ್ ತಾಯಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳು ಯುವ ಚೆಸ್ ತಾರೆಯನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಶಾಲಾ ವಿದ್ಯಾರ್ಥಿಗಳು ಗುಕೇಶ್‌ರ ಮುಖವಾಡ ಧರಿಸಿದ್ದು ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಆನಂದ್ ಸ್ಫೂರ್ತಿ: ಗುಕೇಶ್
ಚೆನ್ನೈಗೆ ಆಗಮಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗುಕೇಶ್, 'ವಿಶ್ವನಾಥನ್ ಆನಂದ್ ನನಗೆ ದೊಡ್ಡ ಸ್ಫೂರ್ತಿ. ಆನಂದ್ ಬೆಂಬಲ, ಮಾರ್ಗದರ್ಶನ ಇಲ್ಲದಿದ್ದರೆ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ' ಎಂದರು. 'ವಿಶ್ವ ಚಾಂಪಿಯನ್‌ಶಿಪ್ ಪಂದ್ಯದ ಬಗ್ಗೆ ತುಂಬಾ ನಿರೀಕ್ಷೆಗಳಿವೆ. ನನಗೆ ನನ್ನ ಮೇಲೆ ಸಂಪೂರ್ಣ ನಂಬಿಕೆಯಿದೆ ಮತ್ತು ಅದೇ ತಂತ್ರಗಾರಿಕೆಯೊಂದಿಗೆ ಚಾಂಪಿಯನ್‌ಶಿಪ್ ಆಡುತ್ತೇನೆ. ಗೆಲ್ಲುವ ವಿಶ್ವಾಸವೂ ಇದೆ' ಎಂದು ಹೇಳಿದರು.
ನವೆಂಬರ್-ಡಿಸೆಂಬರ್‌ನಲ್ಲಿ ಚೆಸ್ ವಿಶ್ವಚಾಂಪಿಯನ್‌ಶಿಪ್
ಕ್ಯಾಂಡಿಡೇಟ್ಸ್ ಟೂರ್ನಿ ವಿಜೇತ ಭಾರತದ ಡಿ.ಗುಕೇಶ್ ಹಾಗೂ ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಫಿಡೆ ತಿಳಿಸಿದೆ. ಆದರೆ ಸ್ಥಳ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ಕ್ಯಾಂಡಿಡೇಟ್ಸ್ ವಿಜೇತರ ನಡುವೆ ಸೆಣಸಾಟ ನಡೆಯಲಿದೆ.
ಐತಿಹಾಸಿಕ ಕ್ಯಾಂಡಿಡೇಟ್ಸ್ ಕಿರೀಟ ಗೆದ್ದ ಡಿ.ಗುಕೇಶ್
ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ವಿಶ್ವ ಚಾಂಪಿಯನ್ ಎನಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ವಿಶ್ವ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಎನಿಸಿಕೊಂಡಿರುವ ಫಿಡೆ ಕ್ಯಾಂಡಿಡೇಟ್ಸ್ ಚೆಸ್‌ನಲ್ಲಿ 17ರ ಗುಕೇಶ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.ಭಾನುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 14 ಹಾಗೂ ಕೊನೆ ಸುತ್ತಿನ ಹಣಾಹಣಿಯಲ್ಲಿ ತಮಿಳುನಾಡಿನ ಗುಕೇಶ್ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಗುಕೇಶ್ ಅಂಕ ಗಳಿಕೆಯನ್ನು 9ಕ್ಕೆ ಹೆಚ್ಚಿಸಿ ಅಗ್ರಸ್ಥಾನ ಕಾಯ್ದುಕೊಂಡರು.
