Asianet Suvarna News Asianet Suvarna News

ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್, ಗುತ್ತಿಗೆದಾರ ಕಪ್ಪುಪಟ್ಟಿಗೆ: ಸಚಿವ ಟಿ.ಬಿ.ಜಯಚಂದ್ರ

ಹೊಳಲೂರು ತುಂಗಾ ನದಿಯಿಂದ ಬೂದಿಹಾಳ್, ಕೊಮ್ಮನಾಳು ಭಾಗಕ್ಕೆ ನೀರು ಹರಿಸಲು ಮಾಡಲಾಗಿರುವ  ರೂ.10 ಕೋಟಿ ಅಂದಾಜು ಮೊತ್ತದ ಏತ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

Criminal case Against Accused says T B Jayachandra

ಶಿವಮೊಗ್ಗ(ಅ.25) : ಭರವಸೆ ನೀಡಿದಂತೆ ಹೊಳಲೂರು ತುಂಗಭದ್ರಾ ಏತ ನೀರಾವರಿ ಯೋಜನೆ ವೀಕ್ಷಿಸಲು ಮಂಗಳವಾರ ಆಗಮಿಸಿದ ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರ ಕಾಮಗಾರಿ ಕುಂಠಿತವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹೊಳಲೂರು ತುಂಗಾ ನದಿಯಿಂದ ಬೂದಿಹಾಳ್, ಕೊಮ್ಮನಾಳು ಭಾಗಕ್ಕೆ ನೀರು ಹರಿಸಲು ಮಾಡಲಾಗಿರುವ  ರೂ.10 ಕೋಟಿ ಅಂದಾಜು ಮೊತ್ತದ ಏತ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದರು.

ಮಂಗಳವಾರ ಹೋಳಲೂರಿನಲ್ಲಿ ನಿರ್ಮಿಸಲಾಗಿರುವ ಏತ ನೀರಾವರಿ ಪಂಪ್‌ಹೌಸ್ ಹಾಗೂ ಪೈಪ್‌ಲೈನ್ ವೀಕ್ಷಿಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದ ರೈತರ ಅನುಕೂಲಕ್ಕಾಗಿ 2008 ರಲ್ಲಿ ಸರ್ಕಾರ ಸುಮಾರು ರೂ.10 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದೆ. ಆದರೆ ಈವರೆಗೆ ಸುಮಾರು ರೂ.13 ಕೋಟಿ ವೆಚ್ಚವಾದರೂ ಯೋಜನೆ ಪೂರ್ಣಗೊಂಡಿಲ್ಲ ಹಾಗೂ ಉದ್ದೇಶ ಈಡೇರದೆ ಸರ್ಕಾರ ಮತ್ತು ರೈತರಿಗೆ ವಂಚನೆ ಮಾಡಲಾಗಿದೆ. ಆದ್ದರಿಂದ ಸಂಬಂಧಿತ ಗುತ್ತಿಗೆದಾರರು ಹಾಗೂ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಗುತ್ತಿಗೆದಾರ ಆರ್‌ಎನ್‌ಎ ಎಂಜಿನಿಯರಿಂಗ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದರು.

ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ತಿಳಿದ ಕೂಡಲೆ ಸರ್ಕಾರ ನೀರಾವರಿ ಇಲಾಖೆಯ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಕಳೆದ ಎರಡು ದಿನಗಳಿಂದ ಯೋಜನೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಅದರಂತೆ ನಾನೂ ಕೂಡ ಖುದ್ದು ಭೇಟಿ ನೀಡಿದ್ದು ವಾಸ್ತವಾಂಶ ಅರಿತಿದ್ದೇನೆ. ಅವ್ಯಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮವಷ್ಟೆ ಅಲ್ಲದೆ ಇನ್ನು ಮೂರು ತಿಂಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.

ಗುತ್ತಿಗೆದಾರರು ಯೋಜನೆ ಸಲುವಾಗಿ ಇಟ್ಟಿರುವ ಇಎಂಡಿ ಠೇವಣಿ ಒಂದೂವರೆ ಕೋಟಿ ರುಪಾಯಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಹಾಗೂ ಸರ್ಕಾರಕ್ಕೆ ಆಗಿರುವ ಹೆಚ್ಚುವರಿ ನಷ್ಟವನ್ನು ಗುತ್ತಿಗೆದಾರರಿಂದಲೇ ವಸೂಲಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ವಿಭಾಗದ ಶಾಸಕಿ ಶಾರದಾ ಪೂರ್ಯಾನಾಯಕ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Follow Us:
Download App:
  • android
  • ios