ಬೆಂಗಳೂರು [ಜು.25] : ರಾಜ್ಯದಲ್ಲಿ ಮೈತ್ರಿ ಪಾಳಯದ ಅಧಿಕಾರ ಕೊನೆಯಾಗುತ್ತಲೇ, ಬಿಜೆಪಿ ಪಾಳಯ  ಸರ್ಕಾರ ರಚಿಸಲು ಮುಹೂರ್ತ ಫಿಕ್ಸ್ ಮಾಡುತ್ತಿದೆ. ಇತ್ತ ನೂತನ ಸಂಪುಟದಲ್ಲಿ ಯಾರಿಗೆ ಸಿಗಲಿದೆ ಸಚಿವ ಸ್ಥಾನ ಎನ್ನುವುದೂ ಕೂಡ ಕುತೂಹಲಕ್ಕೆ ಕಾರಣವಾಗಿದೆ. 

ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.  ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಯೋಗೇಶ್ವರ್ ಕೆಲ ದಿನಗಳಿಂದ ಬಿಜೆಪಿ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೈತ್ರಿ ಸರ್ಕಾರ ಬೀಳಿಸುವಲ್ಲಿ‌ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ.ಯೋಗೇಶ್ವರ್ , ಅತೃಪ್ತ ಶಾಸಕರನ್ನು ಒಗ್ಗೂಡಿಸಿ ರಾಜೀನಾಮೆ ಕೊಡಿಸಿ ಮುಂಬೈಗೆ ಕರೆದುಕೊಂಡು ಹೋಗುವಲ್ಲಿ ಪ್ರಮುಖರಾಗಿದ್ದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ‌ಹಾಗೂ ಡಿ.ಕೆ.ಶಿವಕುಮಾರ್ ಪ್ಲಾನ್ ಗೆ ಟಾಂಗ್ ನೀಡಿದ್ದ ಏಕೈಕ ನಾಯಕ ಎಂದೇ ಗುರುತಿಸಿಕೊಂಡಿದ್ದು, ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ‌ ಬಿಜೆಪಿ ಪಕ್ಷ ಸಂಘಟನೆ ಉದ್ದೇಶದಿಂದ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. 

ಈ ಹಿಂದೆ ಬಿಜೆಪಿ‌ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಖಾತೆ ನಿರ್ವಹಿಸಿದ್ದ ಯೋಗೇಶ್ವರ್ ಮತ್ತೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಲ್ಲಿ ಅವರ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.