ವರ್ಜಿನಿಯಾ[ಆ.19]: ಕಳೆದ ಕೆಲ ದಿನಗಳಿಂದ ಇಂಟರ್ನೆಟ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಅಧಿಕಾರಿ ತನ್ನ ಸಮಯಪ್ರಜ್ಞೆ ಹಾಗೂ ಅನುಭವದಿಂದ ಎರಡು ತಿಂಗಳ ಮಗುವನ್ನು ಕಾಪಾಡಿದ್ದಾರೆ. ವರದಿಗಳನ್ವಯ ಮಗು ಉಸಿರಾಡಲು ಕಷ್ಪಡುತ್ತಿತ್ತು. ಈ ವೇಳೆ ಅಲ್ಲಿಗಾಗಮಿಸಿದ ಮಹಿಳಾ ಪೊಲೀಸ್ ಅಧಿಕಾರಿ ಪ್ರಥಮ ಚಿಕಿತ್ಸೆ ನೀಡಿ ಮಗುವಿಗೆ ಜೀವದಾನ ಮಾಡಿದ್ದಾರೆ.

ಅಮೆರಿಕಾದ ವರ್ಜಿನಿಯಾ ನಗರದ ಡ್ಯಾನ್ ವಿಲೆ ಪೊಲೀಸ್ ವಿಭಾಗ ಈ ಘಟನೆಯ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೆಲಿಸಾ ಕೇರೀ ಯಾವ ರೀತಿ ಕಂದನನ್ನು ಕಾಪಾಡಿದ್ದಾರೆಂಬುವುದು ಸ್ಪಷ್ಟವಾಗುತ್ತದೆ. 

ವಾಸ್ತವವಾಗಿ ಕೇರೀ ರೆಸ್ಟೋರೆಂಟ್ ನಲ್ಲಿ ಲಂಚ್ ಮಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ವೇಯ್ಟರ್ ಒಬ್ಬಾಕೆ ಉಡಿರಾಡಲು ಕಷ್ಟಪಡುತ್ತಿದ್ದ ಕಂದನ ಪ್ರಾಣ ಕಾಪಾಡುವಂತೆ ಕೂಗಿಕೊಂಡಿದ್ದಾಳೆ. ಇದನ್ನು ಆಲಿಸಿದ ಕೇರೀ ಆ ಕೂಡಲೇ ಊಟವನ್ನು ಬಿಟ್ಟು, ಮಗುವಿನ ಪರಕ್ಷಣೆಗೆ ಧಾವಿಸಿ, ಪ್ರಥಮ ಚಿಕಿತ್ಸೆ ನೀಡುತ್ತಾರೆ. ಕೇರಿ ನೀಡಿದ ಚಿಕಿತ್ಸೆ ಫಲಿಸಿದ್ದು, ಮಹಿಳಾ ಪೊಲೀಸ್ ಅಧಿಕಾರಿಯ ತೋಳಿನಲ್ಲಿದ್ದ ಕಂದ ಮತ್ತೆ ಮೊದಲಿನಂತೆ ಆರಾಮಾಗಿ ಉಸಿರಾಡಲಾರಂಭಿಸುತ್ತದೆ. 

ಪೊಲೀಸ್ ವಿಭಾಗ ಪೊಲೀಸ್ ಅಧಿಕಾರಿ ಹಾಗೂ ಮಗುವಿನ ಫೋಟೋ ಕೂಡಾ ಶೇರ್ ಮಾಡಿಕೊಂಡಿದೆ. ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಮಗುವಿನ ತಾಯಿ 'ಒಂದು ವೇಳೆ ಈ ಪೊಲೀಸ್ ಅಧಿಕಾರಿ ರೆಸ್ಟೋರೆಂಟ್ ನಲ್ಲಿ ಇರದಿದ್ದರೆ, ನನ್ನ ಮಗು ಬದುಕುಳಿಯುತ್ತಿರಲಿಲ್ಲ' ಎಂದಿದ್ದಾರೆ.

ವೈರಲ್ ಆದ ವಿಡಿಯೋ ಪೊಲೀಸ್ ಧಿಕಾರಿಯನ್ನು ದಿನ ಬೆಳಗಾಗುವಷ್ಟರಲ್ಲಿ ಹೀರೋ ಆಗಿಸಿದೆ.