ಬೆಳಗಾವಿ (ಡಿ. 15): ಕೋಟ್ಯಂತರ ರು. ಮೊತ್ತದ ಟೆಂಡರ್ ಪ್ರಕ್ರಿಯೆಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಹಾಗೂ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ತಿದ್ದುಪಡಿಗಳನ್ನು ಒಳಗೊಂಡಿರುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ - 2018 ’ಕ್ಕೆ ಶುಕ್ರವಾರ ಅಂಗೀಕಾರ ದೊರೆಯಿತು. 

ವಿಧೇಯಕ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಹಾಲಿ ಇರುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ -1999 (2000)’ (ಕೆಟಿಪಿಪಿ ಕಾಯ್ದೆ) ಪ್ರಕಾರ ಇ ಪ್ರೊಕ್ಯೂರ್‌ಮೆಂಟ್ ಮೂಲಕ ಗುತ್ತಿಗೆದಾರರು ಅತಿ ಕಡಿಮೆ ಮೊತ್ತ ಬಿಡ್ಡಿಂಗ್ ಮಾಡಿ ಟೆಂಡರ್ ಪಡೆಯುತ್ತಿದ್ದಾರೆ. ಆದರೆ, ಗುಣಮಟ್ಟದ ಕಾಮಗಾರಿ ಅಥವಾ ಸೇವೆ ನೀಡದೆ ವಂಚಿಸುವುದು ಅಥವಾ ಟೆಂಡರ್‌ನಲ್ಲಿ ಅಕ್ರಮ ನಡೆಸುವುದನ್ನು ಮಾಡಲಾಗುತ್ತಿದೆ.

ಹೀಗಾಗಿ ಕೆಟಿಪಿಪಿ ಕಾಯ್ದೆಯಲ್ಲಿ ಹೆಚ್ಚು ಪಾರದರ್ಶಕತೆ ತರಲು ಹಾಗೂ ನಿಯಮ ಉಲ್ಲಂಘಿಸಿದ ಗುತ್ತಿಗೆದಾರರ ಮೇಲೆ 3 ವರ್ಷದವರೆಗೆ ನಿರ್ಬಂಧ ವಿಧಿಸುವ ಪ್ರಸ್ತಾಪವನ್ನು ತಿದ್ದುಪಡಿ ವಿಧೇಯಕದಲ್ಲಿ ತರಲಾಗಿದೆ ಎಂದರು. ಜತೆಗೆ, ಟೆಂಡರ್‌ಗಳ ನಿರ್ವಹಣೆಗೆ ‘ಕೆಟಿಪಿಪಿ ಪೋರ್ಟಲ್’ ಮಾಡಲಾಗುವುದು. ಟೆಂಡರ್ ಅಧಿಸೂಚನೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಪೋರ್ಟಲ್ನಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.