ನವದೆಹಲಿ(ಅ.11): ದೇಶದ ಆಗುಹೋಗುಗಳ ಕುರಿತು ಭವಿಷ್ಯವಾಣಿ ನುಡಿಯುವ ಪ್ರಸಿದ್ಧ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರಾ, ಭಾರತದ ಗಡಿಗಳ ವಿಸ್ತರಣೆ ಕುರಿತು ಭವಿಷ್ಯ ನುಡಿದಿದ್ದಾರೆ.

2027ರಲ್ಲಿ ಭಾರತದ ಗಡಿಗಳ ವಿಸ್ತರಣೆ ಪರ್ವ ಆರಂಭವಾಗಲಿದ್ದು, ಆ ವರ್ಷ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ಮರುವಶ ಮಾಡಿಕೊಳ್ಳಲಿದೆ ಎಂದು ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದಾರೆ.

ಅದರಂತೆ 2030ರಲ್ಲಿ ಭಾರತ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶವನ್ನು ಮರುವಶ ಮಾಡಿಕೊಳ್ಳಲಿದ್ದು, ಪಾಕಿಸ್ತಾನಕ್ಕೆ ಭಾರೀ ಮರ್ಮಾಘಾತ ನೀಡಲಿದೆ ಎಂದು ಅನಿರುದ್ಧ ಭವಿಷ್ಯವಾಣಿ ನುಡಿದಿದ್ದಾರೆ.

ಪಾಕಿಸ್ತಾನದ ಗಜ್ಬಾ-ಎ-ಹಿಂದ್(ಭಾರತದ ವಿರುದ್ಧ ಯುದ್ಧ) ಯೋಜನೆ ಮಣ್ಣುಪಾಲಾಗಲಿದ್ದು, ಭವಿಷ್ಯದಲ್ಲಿ ಅದು ತನ್ನ ಒಂದೊಂದೇ ಪ್ರಾಂತ್ಯಗಳನ್ನು ಕಳೆದುಕೊಂಡು ಮಂಕಾಗಲಿದೆ ಎಂದು ಅನಿರುದ್ಧ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದತಿಯಿಂದಾಗಿ ಈಗಾಗಲೇ ಇಂಗು ತಿಂದ ಮಂಗನಂತಾಗಿರುವ ಪಾಕಿಸ್ತಾನ, ಒಂದು ವೇಳೆ ಅನಿರುದ್ಧ ಅವರ ಭವಿಷ್ಯವಾಣಿಯಂತೆ ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳನ್ನು ಕಳೆದುಕೊಂಡರೆ ನಿಜಕ್ಕೂ ಅಧೋಗತಿ ತಲುಪಲಿದೆ. 

ಅನಿರುದ್ಧ ಈ ಹಿಂದೆ 2019ರ ಲೋಕಸಭೆ ಚುನಾವಣೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ಕುರಿತು ಕರಾರುವಕ್ಕಾದ ಭವಿಷ್ಯ ನುಡಿದಿದ್ದರು. ಆದರೆ ಐಪಿಎಲ್ ಫೈನಲ್ ಪಂದ್ಯ ಕುರಿತಾದ ಭವಿಷ್ಯ ಹಾಗೂ ಇತ್ತಿಚೀಗಿನ ವಿಕ್ರಮ್ ಲ್ಯಾಂಡರ್ ಮರುಸಂಪರ್ಕ ಕುರಿತಾದ ಅವರ ಭವಿಷ್ಯವಾಣಿ ಸುಳ್ಳಾಗಿದ್ದವು.