ಪಣಜಿ[ಮಾ.18]: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ನಿಧನ ಹೊಂದುತ್ತಿದ್ದಂತೆಯೇ, ರಾಜಕೀಯ ಅಸ್ಥಿರತೆ ತಲೆದೋರುವ ಸಾಧ್ಯತೆ ಇದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಬಿಜೆಪಿ ಹಾಗೂ ಮಿತ್ರ ಪಕ್ಷದಲ್ಲಿ ಗೊಂದಲವಿದೆ. ಆದರೆ, ಪರ್ರಿಕರ್ ಅವರ ಅಂತ್ಯ ಸಂಸ್ಕಾರ ಆಗುವ ಮುನ್ನವೇ, ರಾಜ್ಯದಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸರಕಾರ ರಚಿಸಲು ಹಕ್ಕು ಮಂಡನೆ ಪತ್ರ ಸಲ್ಲಿಸಿದ್ದು, ಅತೀವ ಟೀಕೆಗೆ ಗುರಿಯಾಗಿದೆ.

'ಕಾಂಗ್ರೆಸ್‌ಗೆ ಅಧಿಕಾರದ ವ್ಯಾಮೋಹ. ಗೋವಾ ಮುಖ್ಯಮಂತ್ರಿ ಅಂತ್ಯ ಸಂಸ್ಕಾರ ಆಗುವವರೆಗೆ ಕಾಯುವಷ್ಟು ವ್ಯವಧಾನವೂ ಗ್ರೆಸ್‌ಗಿಲ್ಲವೇ?..' ಎಂದು ಹಲವರು ಪ್ರಶ್ನಿಸಿದ್ದು, #VampireCongress ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. 

ಕೇವಲ 40 ಸದಸ್ಯರ ಬಲಾಬಲ ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 14 ಸ್ಥಾನಗಳಿದ್ದು, ಕಳೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ 11, ಗೋವಾ ಫಾರ್ವರ್ಡ್ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ), ಸ್ವತಂತ್ರ ಅಭ್ಯರ್ಥಿಗಳು 3, ಎನ್‌ಸಿಪಿ ಹಾಗೂ ಸ್ಪೀಕರ್‌ ಸೇರಿ ತಲಾ ಒಬ್ಬ ಸದಸ್ಯರಿದ್ದಾರೆ. 

ಸದಸ್ಯ ಬಲದ ಲೆಕ್ಕದೊಂದಿಗೆ ರಾಜ್ಯಪಾಲರಿಗೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಹಕ್ಕು ಪತ್ರ ನೀಡಿದ್ದು, ‘ಮನೋಹರ್‌ ಪರ್ರಿಕರ್‌’ ಎಂಬ ‘ಫ್ಯಾಕ್ಟರ್‌’ಮೇಲೆ ಸರಕಾರ ನಿಂತಿದ್ದು, ಇದೀಗ ಮುಖ್ಯಮಂತ್ರಿ ನಿಧನದಿಂದ ಅದು ಬಲ ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ಸರಕಾರ ರಚಿಸಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದೆ. 

ಪರ್ರಿಕರ್ ಫ್ಯಾಕ್ಟರ್ ಮೇಲೆ ನಿಂತ ಸರಕಾರ:

ಇಲ್ಲೀಯವರೆಗೆ ಗೋವಾದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಕೇವಲ ‘ಮನೋಹರ್‌ ಪರ್ರಿಕರ್‌’ ಎಂಬ ‘ಫ್ಯಾಕ್ಟರ್‌’ ಮೇಲೆ ನಿಂತಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದಾಗ, ಕೇಂದ್ರ ಸಚಿವರಾಗಿದ್ದ ಪರ್ರಿಕರ್‌, ಅನಿವಾರ್ಯವಾಗಿ ಗೋವಾಗೆ ಮರಳಿ ಮುಖ್ಯಮಂತ್ರಿಯಾಗಿದ್ದರು. ಪ್ರಮುಖ ಮಿತ್ರಪಕ್ಷ ಗೋವಾ ಫಾರ್ವರ್ಡ್‌ ಪಕ್ಷವು, ‘ಕೇವಲ ಮನೋಹರ್‌ ಪರ್ರಿಕರ್‌ ಅವರು ಮುಖ್ಯಮಂತ್ರಿ ಆಗಿರುವರೆಗೆ ನಮ್ಮ ಬೆಂಬಲ ಸರ್ಕಾರಕ್ಕೆ ಇರುತ್ತದೆ. ಆಮೇಲಿನದು ಹೇಳಲು ಆಗುವುದಿಲ್ಲ’ ಎಂದು ಷರತ್ತು ವಿಧಿಸಿತ್ತು. ಹೀಗಾಗಿ ಮೂವರು ಶಾಸಕರನ್ನು ಹೊಂದಿರುವ ಗೋವಾ ಫಾರ್ವರ್ಡ್‌ ಪಕ್ಷ ಬೆಂಬಲ ಹಿಂಪಡೆದರೆ ಗತಿಯೇನು ಎಂಬ ಪ್ರಶ್ನೆ ಎದುರಾಗಿದೆ.

ಗೋವಾ ಸರ್ಕಾರ ಉಳಿಯುತ್ತಾ : ಉರುಳುತ್ತಾ..?

ಇದೇ ವೇಳೆ ಸರ್ಕಾರದ ಜತೆ ಅಷ್ಟೇನೂ ಸುಮಧುರ ಸಂಬಂಧ ಹೊಂದಿರದ ಇನ್ನೊಂದು ಮಿತ್ರಪಕ್ಷವಾದ ಎಂಜಿಪಿಯೂ ‘ಪರ್ರಿಕರ್‌’ ಎಂಬ ಕೊಂಡಿಯನ್ನು ಆಧರಿಸಿ ಸರ್ಕಾರದ ಜತೆಗೆ ನಿಂತುಕೊಂಡಿತ್ತು. ಪರ್ರಿಕರ್‌ ಎಂಬ ಆಯಸ್ಕಾಂತೀಯ ವ್ಯಕ್ತಿತ್ವವು ಉತ್ತರ ಧ್ರುವ-ದಕ್ಷಿಣ ಧ್ರುವದಂತಿದ್ದ ಪಕ್ಷಗಳನ್ನು ಸರ್ಕಾರದಲ್ಲಿ ಹಿಡಿದಿಟ್ಟುಕೊಂಡಿತ್ತು. ಆದರೆ ಪರ್ರಿಕರ್‌ ಇಲ್ಲದ ಈ ಸಂದರ್ಭದಲ್ಲಿ ಸರ್ಕಾರವನ್ನು ಮುನ್ನಡೆಸುವ ಪರ್ರಿಕರ್‌ ಅವರಂಥ ಸಮರ್ಥ ನಾಯಕರ ಕೊರತೆ ರಾಜ್ಯ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ. 

ಗೋವಾ ಮುಂದಿನ ಸಿಎಂ ಯಾರು ?

ಹೀಗಾಗಿ ಸರ್ಕಾರ ಉಳಿಯುತ್ತಾ? ಉರುಳುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ಈಗಾಗಲೇ ಒಬ್ಬ ಶಾಸಕ ನಿಧನ ಹೊಂದಿದ ಕಾರಣ ಗೋವಾ ಸರ್ಕಾರ ಅಲ್ಪಮತಕ್ಕೆ ಇಳಿದಿದೆ ಎಂದು ಆರೋಪಿಸಿ, ಕಾಂಗ್ರೆಸ್‌ ಪಕ್ಷ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದೆ. ಈಗ ಪರ್ರಿಕರ್‌ ಅವರ ನಿಧನದ ಕಾರಣ ಕಾಂಗ್ರೆಸ್‌ ವಾದಕ್ಕೆ ಮತ್ತಷ್ಟು ಪ್ರಬಲ ಕಾರಣ ಸಿಗುವ ಸಾಧ್ಯತೆ ಇದೆ.