ಬೆಂಗಳೂರು (ಜು. 06): ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆ ಸಂಬಂಧ ಬೃಹತ್ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಕೆ.ಆರ್.ಪುರ ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷರಾಗಿರುವ ಬೈರತಿ ಬಸವರಾಜ್ ನಡುವೆ ತಿಕ್ಕಾಟ ತಾರಕಕ್ಕೇರಿದ್ದು, ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನು ಬೈರತಿ ಬಸವರಾಜು ನೀಡಿದ್ದಾರೆ ಎನ್ನಲಾಗಿದೆ.

ದೋಸ್ತಿ ಸರ್ಕಾರಕ್ಕೆ 3ನೇ ಸಂಕಟ: ಮತ್ತೊಬ್ಬ ಕೈ ಶಾಸಕನಿಂದ ರಾಜೀನಾಮೆ ಬೆದರಿಕೆ

ಕೆಎಸ್‌ಡಿಎಲ್‌ನ ಹಾಲಿ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರನ್ನು ವರ್ಗಾವಣೆ ಮಾಡಿ ಆ ಹುದ್ದೆಗೆ ವಿಜಯಕುಮಾರ್ ಶೆಟ್ಟಿ ಅವರನ್ನು ನೇಮಿಸಲು ಬೈರತಿ ಬಸವರಾಜು ಪ್ರಯತ್ನಿಸಿದ್ದರು. ಈ ಬಗ್ಗೆ ಬೃಹತ್ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್‌ರಿಂದ ಸ್ಪಂದನೆ ಸಿಗದ ಕಾರಣ ನೇರವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ಅನುಮೋದನೆ ಪಡೆದುಕೊಂಡು ವರ್ಗಾವಣೆ ಆದೇಶ ಪಡೆದುಕೊಂಡರು.

ಆದರೆ, ಜಾರ್ಜ್ ಮಾತ್ರ ರವಿಕುಮಾರ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ಇತ್ತೀಚೆಗೆ ಜಾರ್ಜ್ ಹಾಗೂ ಬಸವರಾಜು ನಡುವೆ ಜೋರಾಗಿ ಮಾತಿನ ಚಕಮಕಿ ನಡೆದಿತ್ತು. ಹೀಗಿದ್ದರೂ ಜಾರ್ಜ್ ಪಟ್ಟು ಸಡಿಲಿಸಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಬೈರತಿ ಬಸವರಾಜು ಸರ್ಕಾರ ನೀಡಿದ ಸವಲತ್ತು ವಾಪಸು ನೀಡಿಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಸರ್ಕಾರಿ ಕಾರು ವಾಪಸು ನೀಡಿದ್ದು, ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದ ಮೊದಲ ಬಾಡಿ ಸ್ಕ್ಯಾನರ್ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ?

ಕೆ.ಜೆ. ಜಾರ್ಜ್ ಅವರ ಧೋರಣೆ ಇದೇ ರೀತಿ ಮುಂದುವರೆದರೆ ಅಧ್ಯಕ್ಷ ಸ್ಥಾನದಲ್ಲಿ ಮುಂ ದುವರೆಯುವುದರಲ್ಲಿ ಅರ್ಥವಿಲ್ಲ. ಎರಡು ಬಾರಿ ಶಾಸಕನಾಗಿರುವ ನನಗೆ ಕನಿಷ್ಠ ನನ್ನ ಅಧ್ಯಕ್ಷತೆಯಲ್ಲಿರುವ ನಿಗಮದ ಅಧಿಕಾರಿ ನೇಮಕ ಮಾಡಿಕೊಳ್ಳಲೂ ಸ್ವಾತಂತ್ರ್ಯವಿಲ್ಲವೇ? ಹಾಗಾದರೆ ಅಧ್ಯಕ್ಷ ಸ್ಥಾನದಲ್ಲಿ ಏಕೆ ಮುಂದುವರೆಯಬೇಕು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.