ನವದೆಹಲಿ[ಜು.06]: ಬೆಂಗಳೂರಿನ ‘ಕೆಂಪೇಗೌಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ವು ಪ್ರಯಾಣಿಕರ ದೈಹಿಕ ಪರಿಶೀಲನೆಗಾಗಿ ಮೆಟಲ್‌ ಡಿಟಕ್ಟರ್‌ ಬದಲಿಗೆ ಬಾಡಿ ಸ್ಕಾ್ಯನರ್‌ಗಳನ್ನು ಅಳವಡಿಸಿಕೊಳ್ಳುವ ದೇಶದ ಮೊದಲ ವಿಮಾನ ನಿಲ್ದಾಣವಾಗುವ ಸಾಧ್ಯತೆಯಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 1ರಿಂದಲೇ ಬಾಡಿ ಸ್ಕಾ್ಯನರ್‌ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದ್ದು, ಈ ಸೇವೆ ಇನ್ನೂ 3-4 ವಾರ ಮುಂದುವರಿಯಲಿದೆ. ಮಿಲ್ಲೆಮೀಟರ್‌ ವೇಲ್‌ ಎಂಬ ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸುವ ಬಾಡಿ ಸ್ಕ್ಯಾನರ್ಗಳಿಂದ ಯಾವುದೇ ವ್ಯಕ್ತಿ ಅಥವಾ ಗರ್ಭಿಣಿ ಮಹಿಳೆಯರಿಗೂ ಯಾವುದೇ ಸಮಸ್ಯೆಯಿಲ್ಲ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 2020ರ ಏಪ್ರಿಲ್‌ ಒಳಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ(ಬಿಐಎಎಲ್‌) ಮೆಟಲ್‌ ಡಿಟಕ್ಟರ್‌ ಇರುವೆಡೆ ಬಾಡಿ ಸ್ಕಾ್ಯನರ್‌ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ, ಕೇವಲ ಒಂದು ಸೆಟ್‌ ಮೆಟಲ್‌ ಡಿಟಕ್ಟರ್‌ ಮಾತ್ರ ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಏತನ್ಮಧ್ಯೆ, ನಾಗರಿಕ ವಿಮಾನಯಾನ ದಳದ ಕಾರ್ಯದರ್ಶಿ, ಭದ್ರತಾ ವಿಚಾರದಲ್ಲಿ ಸೂಕ್ಷ್ಮ ಹಾಗೂ ಭೀತಿಯಿರುವ ವಿಮಾನ ನಿಲ್ದಾಣಗಳಲ್ಲಿ 2020 ಏಪ್ರಿಲ್‌ ತಿಂಗಳ ಒಳಗಾಗಿ ಬಾಡಿ ಸ್ಕಾ್ಯನರ್‌ಗಳನ್ನು ಅಳವಡಿಸಬೇಕು ಎಂದು ಹೇಳಿದೆ. ಭದ್ರತಾ ಸೂಕ್ಷ್ಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಅಮೃತಸರ, ಹೈದರಾಬಾದ್‌ ಹಾಗೂ ಜಮ್ಮು-ಕಾಶ್ಮೀರದ ಮೂರು ವಿಮಾನ ನಿಲ್ದಾಣಗಳಿವೆ.