ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಶೀಘ್ರವೇ ತಕ್ಕ ಉತ್ತರ ಕೊಡುವುದಾಗಿ ಹೇಳಿದ್ದಾರೆ. ಸರ್ಕಾರ ಕೆಡವಲು ಡಿಕೆಶಿ ಸಾಕು ಎಂಬ ಯಡಿಯೂರಪ್ಪ ಹೇಳಿಕೆಗೆ ಸವಾಲು ಹಾಕಿದ್ದಾರೆ.

ಬೆಳಗಾವಿ : ಬಿಜೆಪಿ ನಾಯಕರ ಆರೋಪಗಳಿಗೆ ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಬದ್ಧತೆ ಇದ್ದರೆ ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಗಮನ ಸೆಳೆಯುವುದಕ್ಕೆ ಶಾಸಕರಿಗೆ ಅಧಿವೇಶನ ಒಳ್ಳೆಯ ಅವಕಾಶ. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಹೋಗಬಾರದು. ಜನರ ಹಿತದೃಷ್ಟಿಯಿಂದ ಸದನದಲ್ಲಿ ಭಾಗಿಯಾಗಿ ಚರ್ಚೆ ನಡೆಸಬೇಕು. ಅದಕ್ಕೆ ಸರ್ಕಾರ ಸಮರ್ಥವಾಗಿ ಉತ್ತರ ಕೊಡುತ್ತದೆ ಎಂದು ಹೇಳಿದರು.

ಬಿಜೆಪಿಯವರು ಹಸಿರು ಟವಲ್‌ ಹಾಕಿಕೊಂಡು ರೈತರ ರೀತಿ ಫೋಸು ಕೊಡುತ್ತಿದ್ದಾರೆ. ಹಸಿರು ಟವೆಲ್‌ ಹಾಕಿದವರೆಲ್ಲಾ ರೈತರಾಗಲು ಸಾಧ್ಯವಿಲ್ಲ. ಬಿಜೆಪಿಯವರೇನು ಹೊಲ ಉಳುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಸರ್ಕಾರ ಕೆಡವಲು ಡಿ.ಕೆ.ಶಿವಕುಮಾರ್‌ ಸಾಕು ಎಂಬ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿವೇಶನ ಮುಗಿಯುವುದರ ಒಳಗೆ ಯಡಿಯೂರಪ್ಪ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆಯ ದಿನ ಸರ್ಕಾರ ಪತನವಾಗಲಿದೆ ಎಂಬ ಆರ್‌. ಅಶೋಕ್‌ ಹೇಳಿಕೆಗೆ ಲೇವಡಿ ಮಾಡಿದ ಅವರು, ಅಶೋಕ್‌ ರಾಜಕಾರಣ ಬಿಟ್ಟು ಭವಿಷ್ಯ ಹೇಳಲು ಶುರು ಮಾಡಿದ್ದಾರೆ ಎಂದರು.

ಪ್ರಿಯಾಂಕ ಖರ್ಗೆ ತರಾಟೆ: ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಬಿಜೆಪಿಯವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ನಮ್ಮ ತಟ್ಟೆಯಲ್ಲಿ ನೊಣ ಹುಡುಕುವುದು ಸರಿಯಲ್ಲ. ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ಋುಣಮುಕ್ತ ಪತ್ರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರ ರೈತರ ಪರವಿದೆ. ಹೀಗಾಗಿ ಬಿಜೆಪಿಯವರು ನಮ್ಮ ಬಗ್ಗೆ ಹೇಳುವ ಅಗತ್ಯವಿಲ್ಲ ಎಂದು ಹೇಳಿದರು.