ಜಯಮಾಲಾ ವಿರುದ್ಧ ಕಾಂಗ್ರೆಸಿಗರು ಗರಂ ..?

Congress Leaders May  UnHappy With Jayamala
Highlights

ಸಚಿವೆ ಜಯಮಾಲ ವಿರುದ್ಧ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರಾ ಎನ್ನುವ ಪ್ರಶ್ನೆ ಇದೀಗ  ಮೂಡಿದೆ. ಮಂಗಳವಾರ ಅತ್ಯಧಿಕ ಸಂಖ್ಯೆಯಲ್ಲಿ ಕಲಾಪಕ್ಕೆ ನಾಯಕರು ಗೈರಾದ ಹಿನ್ನೆಲೆಯಲ್ಲಿ ಇಂತಹದ್ದೊಂದು ಅನುಮಾನ ವ್ಯಕ್ತವಾಗಿದೆ. 

ವಿಧಾನ ಪರಿಷತ್‌ :  ಹಿರಿಯರ ಮನೆಯ ಸಭಾನಾಯಕಿಯಾಗಿ ಜಯಮಾಲ ಅವರನ್ನು ಆಯ್ಕೆ ಮಾಡಿರುವುದಕ್ಕೆ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ಸದಸ್ಯರು ಕಲಾಪದಿಂದ ದೂರ ಉಳಿದಿದ್ದಾರೆಯೇ?

ಇಂತಹದೊಂದು ಅನುಮಾನ ಮಂಗಳವಾರದ ಕಲಾಪದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಗಮನಿಸಿದಾಗ ಸಹಜವಾಗಿ ಮೂಡಿಬಂದಿತು. ಸದಸ್ಯರು ಸದನಕ್ಕೆ ನಿಗದಿತ ವೇಳೆಗೆ ಬಾರದ ಹಿನ್ನೆಲೆಯಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಲಾಪ ಸುಮಾರು 15 ನಿಮಿಷ ತಡವಾಗಿ ಶುರುವಾಯಿತು. ಕೋರಂ ಆದ ನಂತರ ಕಲಾಪ ಆರಂಭವಾಯಿತು.

ಹಿರಿಯರ ಮನೆಯಲ್ಲಿ ಕಾಂಗ್ರೆಸ್‌ ಸದಸ್ಯರ ಸಂಖ್ಯೆ33, ಜೆಡಿಎಸ್‌ ಸದಸ್ಯರ ಬಲ 14. ಆದರೆ ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾದಾಗ ಕಾಂಗ್ರೆಸ್‌ನ ಕೇವಲ ಆರು, ಜೆಡಿಎಸ್‌ನ ಏಳು ಸದಸ್ಯರು ಹಾಗೂ ಬಿಜೆಪಿಯ 12 ಸದಸ್ಯರು ಮಾತ್ರ ಹಾಜರಿದ್ದರು. ಸಭಾನಾಯಕಿ ಜಯಮಾಲ ಸೇರಿದಂತೆ ಸದಸ್ಯ ಐವಾನ್‌ ಡಿಸೋಜಾ, ವೀಣಾ ಅಚ್ಚಯ್ಯ, ಎಸ್‌.ಆರ್‌. ಪಾಟೀಲ್‌ ಸೇರಿದಂತೆ ಆರು ಸದಸ್ಯರು ಉಪಸ್ಥಿತರಿದ್ದರು.

ಪರಿಷತ್‌ಗೆ ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ತಮ್ಮ ಪರಿಚಯ ಮಾಡಿಕೊಳ್ಳಲು ಸಭಾಪತಿ ಸೂಚಿಸಿದರು. ಆದರೆ ಬಹುತೇಕ ಸದಸ್ಯರು ಗೈರಾಗಿದ್ದರು. ಆಡಳಿತ ಪಕ್ಷದಲ್ಲಿ ಸಚಿವರು, ಸದಸ್ಯರ ಸಂಖ್ಯೆ ಕಡಿಮೆ ಇದ್ದ ಬಗ್ಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಗರಂ ಆಗಿ, ತಮ್ಮ ಪಕ್ಷದ ಸದಸ್ಯರು ಹಾಜರಿರುವಂತೆ ಯಾಕೆ ಗಮನ ಹರಿಸಲಿಲ್ಲ ಎಂದು ಪ್ರಶ್ನಿಸಿದರು.

ನೇಮಕವಾಗದ ಮುಖ್ಯ ಸಚೇತಕರು:

ಆಡಳಿತ ಪಕ್ಷದಿಂದ ಈವರೆಗೆ ಮುಖ್ಯ ಸಚೇತಕರನ್ನು ನೇಮಕ ಮಾಡದೇ ಇರುವುದು ಸಹ ಸದಸ್ಯರ ಗೈರು ಹಾಜರಿಗೆ ಕಾರಣವಾಗಿದೆ. ಮುಖ್ಯ ಸಚೇತಕರಿದ್ದಲ್ಲಿ ಸಚಿವರು, ಸದಸ್ಯರು ಕಲಾಪದ ವೇಳೆ ಹಾಜರಿರುವಂತೆ ನೋಡಿಕೊಳ್ಳುತ್ತಿದ್ದರು.

loader