ಮಂಗಳೂರು :  ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಕರಾವಳಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ರಾಜಕೀಯಕ್ಕೆ ತುಲನೆ ಮಾಡಿ ವಿವಾದಾಸ್ಪದ ಹೇಳಿಕೆ ನೀಡಿರುವುದಕ್ಕೆ ಅಸ​ಮಾಧಾನ ವ್ಯಕ್ತ​ಪ​ಡಿ​ಸಿ​ರುವ ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಹಿರಿಯ ರಾಜ​ಕಾ​ರ​ಣಿ​ಯಾ​ದ ರೇವಣ್ಣ ಅವ​ರಿಂದ ಇಂತಹ ಹೇಳಿಕೆ ನಿರೀ​ಕ್ಷಿ​ಸಿ​ರ​ಲಿಲ್ಲ ಎಂದು ತಿಳಿ​ಸಿ​ದ್ದಾರೆ.

‘ಕರಾವಳಿ ಜನ ಬಿಜೆಪಿಗೆ ಓಟು ಹಾಕಿದ್ದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಹಿಂದೆ ಬಿದ್ದಿದೆ’ ಎಂದು ರೇವಣ್ಣ ಹೇಳಿದ್ದರು. ಈ ಬಗ್ಗೆ ನಗ​ರ​ದಲ್ಲಿ ಸುದ್ದಿ​ಗಾ​ರರಿಗೆ ಪ್ರತಿಕ್ರಿಯಿಸಿದ ಖಾದರ್‌, ಎಚ್‌.ಡಿ.ರೇವಣ್ಣ ಅವರು ಹಿರಿಯ ರಾಜಕಾರಣಿ ಮತ್ತು ಮಾರ್ಗದರ್ಶಕರು. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಅವರ ಇಲಾಖೆಯಿಂದ ಅನುದಾನ ಒದಗಿಸಿ ಕೊಡುಗೆ ನೀಡಿದ್ದಾರೆ. ಆದರೆ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಮಂಗಳೂರನ್ನು ಶಿಕ್ಷಣದ ಕಾಶಿ ಎಂದೇ ಬಣ್ಣಿಸಲಾಗುತ್ತದೆ. ಇಲ್ಲಿ ರಾಜ್ಯ, ರಾಷ್ಟ್ರವಲ್ಲದೆ ಹೊರದೇಶದ ವಿದ್ಯಾರ್ಥಿಗಳು ಬಂದು ಕಲಿಯುತ್ತಿದ್ದಾರೆ. ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ. ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ಪಡೆದಿದೆ. ಈ ಹಿಂದಿನ ವರ್ಷಗಳಲ್ಲಿ ಶಿಕ್ಷಣದಲ್ಲಿ ನಮ್ಮ ಜಿಲ್ಲೆ ಗಮನಾರ್ಹ ಸಾಧನೆ ಮಾಡಿದೆ. ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದರೂ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ವಿದ್ಯಾರ್ಥಿಗಳು, ಹೆತ್ತವರು ಶ್ರಮ ವಹಿಸುತ್ತಾರೆ. ಶಿಕ್ಷಣ ಮತ್ತು ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ ಎಂದು ಖಾದರ್‌ ಪ್ರತಿಕ್ರಿಯಿಸಿದ್ದಾರೆ.