ಬೆಂಗಳೂರು(ನ. 03): ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣೆಗೆ ತೆರೆ ಬಿದ್ದಿದೆ. 3 ಲೋಕಸಭೆ, 2 ವಿಧಾನಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಇದೀಗ ಯಾವ್ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲಿತ್ತಾರೆ ಎನ್ನುವ ಕುತೂಹಲ ಕೆರಳಿಸಿರುವುದು ಒಂದು ಕಡೆಯಾದ್ರೆ, ತ್ತೊಂದೆಡೆ ಸೋಲು-ಗೆಲುವಿನ ಲೆಕ್ಕಚಾರಗಳು ಜೋರಾಗಿಯೇ ನಡೆದಿವೆ.

5 ಉಪಚುನಾವಣೆ ಮತದಾನ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಮತದಾನ ಮುಕ್ತಾಯಾಗುತ್ತಿದ್ದಂತೆಯೇ 5 ಕ್ಷೇತ್ರಗಳ ಉಪಚುನಾವಣೆಯ ವರದಿಯನ್ನು ರಾಜ್ಯ ಗುಪ್ತಚರ ಇಲಾಖೆ ಸಿಎಂ ಕುಮಾರಸ್ವಾಮಿ ಅವರಿಗೆ ಸಲ್ಲಿಸಿದೆ. ಯಾವ್ಯಾವ ಕ್ಷೇತ್ರಗಳಲ್ಲಿ ಜನರು ಯಾರಿಗೆ ಹೆಚ್ಚು ವೋಟು ಹಾಕಿದ್ದಾರೆಂದು ಅಂದಾಜು ಮಾಡಿದೆ.

ಗುಪ್ತಚರರು ವರದಿಯಲ್ಲಿ  ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಐದೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಹೇಳಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಪಕ್ಷ ಏಕಪಕ್ಷೀಯ ಗೆಲುವು ಕಾಣಲಿದೆ. 

ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪ ಪೈಪೋಟಿ ಇದ್ದರೂ ಮೈತ್ರಿ  ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನು ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಗೆಲುವು ಸಾಧಿಸಲಿದ್ದಾರೆ ಎಂದು ಗುಪ್ತಚರ ಇಲಾಖೆಯ ವರದಿ ಹೇಳಿದೆ.