ಬೆಂಗಳೂರು [ಜು.07]:  ಜು.12ರಿಂದ ಆರಂಭವಾಗಬೇಕಿದ್ದ ವಿಧಾನಮಂಡಲ ಅಧಿವೇಶನವನ್ನು ಮುಂದೂಡುವುದು, ಪಕ್ಷದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೋಮವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಆಯೋಜಿಸುವುದು ಮತ್ತು ಅತೃಪ್ತ ಕಾಂಗ್ರೆಸ್ಸಿಗರ ರಾಜೀನಾಮೆ ಅಂಗೀಕಾರ ಮಾಡದಂತೆ ಸ್ಪೀಕರ್‌ ಅವರನ್ನು ಕೋರುವುದು.

ಪತನದ ಅಂಚಿನಲ್ಲಿರುವ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ತಕ್ಷಣಕ್ಕೆ ಕಾಂಗ್ರೆಸ್‌ ಕೈಗೊಳ್ಳಲು ಮುಂದಾಗಿರುವ ಕ್ರಮಗಳಿವು. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಹೈಕಮಾಂಡ್‌ ಅಣತಿಯನ್ನು ಹೊತ್ತು ತಂದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಶನಿವಾರ ಸಂಜೆ ಸರಣಿ ಸಭೆಗಳನ್ನು ನಡೆಸಿದರು. ಮೊದಲಿಗೆ ಕಾಂಗ್ರೆಸ್‌ ಹಿರಿಯ ನಾಯಕರ ಸಭೆ ನಡೆಸಿದ ಅವರು ಈ ಸಭೆಯಲ್ಲಿ ಹಾಲಿ ಪರಿಸ್ಥಿತಿಗೆ ಕಾರಣಗಳನ್ನು ನಾಯಕರಿಂದ ಕೇಳಿ ತಿಳಿದುಕೊಂಡರು. ಅನಂತರ, ಖುದ್ದಾಗಿ ತೆರಳಿ ರಾಜೀನಾಮೆ ನೀಡಿರುವ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದರು.

ಅನಂತರ ದೇವೇಗೌಡ ಅವರ ನಿವಾಸಕ್ಕೆ ತೆರಳಿದ ವೇಣುಗೋಪಾಲ್‌ ಅವರೊಂದಿಗೂ ಮಾತುಕತೆ ನಡೆಸಿದರು. ಇದಾದ ನಂತರ ಅಂತಿಮವಾಗಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಕಾಂಗ್ರೆಸ್‌ ನಾಯಕರ ಸಭೆಯನ್ನು ಅವರು ಮತ್ತೊಮ್ಮೆ ನಡೆಸಿದರು.

ಈ ಸಭೆಯಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದು ಹೈಕಮಾಂಡ್‌ನ ಬಯಕೆ ಎಂಬುದನ್ನು ನಾಯಕರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಭೆಯು ವಿಧಾನಮಂಡಲ ಅಧಿವೇಶನವನ್ನು ಮುಂದೂಡುವ ಸಾಧ್ಯತೆಗಳನ್ನು ಪರಿಶೀಲಿಸಲು ತೀರ್ಮಾನಿಸಿತು. ವಿಧಾನಮಂಡಲ ಅಧಿವೇಶನ ನಡೆದರೆ ಆಗ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ಕಾರಣಕ್ಕೆ ಬಹುಮತ ಸಾಬೀತುಪಡಿಸುವ ಪರಿಸ್ಥಿತಿ ಉಂಟಾಗಬಹುದು. ಹೀಗಾಗಿ ಅಧಿವೇಶನವನ್ನು ಮುಂದೂಡಲು ಸಾಧ್ಯವೇ ಎಂಬುದನ್ನು ಮೊದಲು ಪರಿಶೀಲಿಸಬೇಕು.

ವಿಧಾನ ಮಂಡಲ ಅಧಿವೇಶನ ಮುಂದೂಡಲು ಸಾಧ್ಯವಾದರೆ, ಅತೃಪ್ತ ಶಾಸಕರ ರಾಜೀನಾಮೆ ಶೀಘ್ರ ಅಂಗೀಕಾರವಾಗದಂತೆ ತಡೆಯಲು ಯತ್ನಿಸಬಹುದು. ಈ ಬಗ್ಗೆ ಸ್ಪೀಕರ್‌ಗೆ ಅತೃಪ್ತರ ವಿರುದ್ಧ ದೂರು ನೀಡುವ ಮಾರ್ಗವನ್ನು ಅನುಸರಿಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ.

ಇದಲ್ಲದೆ, ಕಾಂಗ್ರೆಸ್ಸಿನ ಮತ್ಯಾವ ಶಾಸಕರೂ ಅತೃಪ್ತರ ಗುಂಪು ಸೇರದಂತೆ ತಡೆಯಲು ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಲು ಸಭೆ ಚಿಂತನೆ ನಡೆಸಿತು ಎಂದು ಮೂಲಗಳು ಹೇಳಿವೆ.

1. ವಿಧಾನಮಂಡಲ ಅಧಿವೇಶನ ಮುಂದೂಡುವುದು 2. ಇನ್ನಷ್ಟುರಾಜೀನಾಮೆ ತಡೆಯಲು ನಾಳೆ ಶಾಸಕಾಂಗ ಸಭೆ 3. ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್‌ಗೆ ಮನವಿ