ರಾಜ್ಯದಲ್ಲಿ ಸರ್ಕಾರ ಸಾಲ ಘೋಷಣೆ ಮಾಡಿದ್ದು ಅದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಈ 11 ಷರತ್ತುಗಳಲ್ಲಿ ಹೆಚ್ಚು ಕಮ್ಮಿಯಾದಲ್ಲಿ ಸಾಲ ಮನ್ನಾ ಸೌಲಭ್ಯ ಸಿಗದಿರುವ ಸಾಧ್ಯತೆ ಇದೆ. 

ಮಂಗಳೂರು : ರೈತರ .1 ಲಕ್ಷದವರೆಗಿನ ಮೊತ್ತದ ಬೆಳೆ ಸಾಲ ಮನ್ನಾ ಘೋಷಣೆ ಮಾಡಿ ರೈತರ ಮೊಗದಲ್ಲಿ ಹರ್ಷದ ಹೊನಲು ಹರಿಸಿದ ರಾಜ್ಯ ಸರ್ಕಾರ ಈಗ ಯೋಜನೆಯನ್ನು ಜಾರಿಗೆ ತರುವಾಗ ಕಠಿಣ ಷರತ್ತುಗಳನ್ನು ವಿಧಿಸಿದೆ. ಸಾಲ ಮನ್ನಾ ಯೋಜನೆ ರೈತರ ಮೂಗಿಗೆ ತುಪ್ಪ ಸವರಿದಂತಾದರೆ, ಸಹಕಾರಿ ಸಂಘಗಳ ಪಾಲಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಬೆಳೆ ಸಾಲ ಮನ್ನಾ ಯೋಜನೆಯ ಆದೇಶದಲ್ಲಿ ಒಟ್ಟು 11 ಷರತ್ತುಗಳನ್ನು ಉಲ್ಲೇಖಿಸಲಾಗಿದೆ. ಈ ಷರತ್ತುಗಳನ್ನು ಪಾಲಿಸದಿದ್ದರೆ ಸಾಲ ಮನ್ನಾ ಅಸಾಧ್ಯ. ಪಾಲಿಸಿದರೂ ಸಾಲ ಮನ್ನಾ ಸೌಲಭ್ಯ ಪಡೆಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ ಸುಸ್ತಿದಾರ ರೈತರ ಪರಿಸ್ಥಿತಿ.

ಠೇವಣಿ ಇದ್ದರೆ ಮನ್ನಾ ಇಲ್ಲ: 10-7-2018ಕ್ಕೆ ಹೊರಬಾಕಿ ಇರುವಲ್ಲಿ .1 ಲಕ್ಷ ಮೊತ್ತವರೆಗೆ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಆದರೆ ಸುಸ್ತಿದಾರ ರೈತನ ಸಹಕಾರಿ ಸಂಘದ ಖಾತೆ ಖಾಲಿ ಇರಬೇಕು. ಒಂದು ವೇಳೆ ಖಾತೆಯಲ್ಲಿ ಸ್ವಲ್ಪ ಠೇವಣಿ ಇದ್ದರೂ ಮನ್ನಾ ಮೊತ್ತ ಪೂರ್ತಿ ಸಿಗದು. ರೈತನ ಖಾತೆಯಲ್ಲಿ ಇರುವ ಠೇವಣಿ ಮೊತ್ತವನ್ನು ಸಾಲ ಮನ್ನಾ ಮೊತ್ತದಿಂದ ಕಡಿತಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರೈತರು ಸಹಕಾರಿ ಸಂಘಗಳಲ್ಲಿ ಸಾಲಕ್ಕಾಗಿ ಖಾತೆ ತೆರೆದಿರುತ್ತಾರೆ. ದುಡಿಮೆಯಿಂದ ಉಳಿಸಿದ ಅಲ್ವಸ್ವಲ್ಪ ಹಣವನ್ನು ಖಾತೆಗೆ ಜಮೆ ಮಾಡಿರುತ್ತಾರೆ. ಇನ್ನೂ ಕೆಲವು ರೈತರು ಸಾಲ ಮರುಪಾವತಿಗೆ ಒಂದಷ್ಟುಮೊತ್ತವನ್ನು ಠೇವಣಿಯಾಗಿ ಖಾತೆಯಲ್ಲಿ ಇರಿಸುತ್ತಾರೆ. ಆದರೆ ಸಾಲ ಮನ್ನಾ ಸೌಲಭ್ಯ ಬೇಕಾದರೆ ಖಾತೆಯಲ್ಲಿ ಠೇವಣಿ ಇರಬಾರದು. ಹಾಗಾಗಿ ಇದು ಪರೋಕ್ಷವಾಗಿ ಇರುವ ಠೇವಣಿಯನ್ನೇ ವಾಪಸ್‌ ತೆಗೆದುಕೊಳ್ಳಲು ರೈತರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಒಂದು ವೇಳೆ ರೈತರು ಸಾಲ ಮನ್ನಾ ಸೌಲಭ್ಯಕ್ಕೆ ಸಾಮೂಹಿಕವಾಗಿ ಠೇವಣಿ ಮೊತ್ತ ವಾಪಸ್‌ ಪಡೆಯಲು ಮುಂದಾದರೆ, ಸಹಕಾರಿ ಸಂಘಗಳು ಬಾಗಿಲು ಮುಚ್ಚಬೇಕಷ್ಟೆಎನ್ನುವ ಆತಂಕ ಸಹಕಾರಿ ಸಂಘಗಳಿಗೆ ತಲೆದೋರಿದೆ.

ತೆರಿಗೆ ಪಾವತಿಸದಿದ್ದರೂ ಪ್ಯಾನ್‌ಕಾರ್ಡ್‌ ಬೇಕು:

ಈ ಬಾರಿ ಸಾಲ ಮನ್ನಾ ಸೌಲಭ್ಯ ಬೇಕಾದರೆ ಆಧಾರ್‌ ಕಾರ್ಡ್‌ ಜೊತೆಗೆ ಪ್ಯಾನ್‌ ಕಾರ್ಡನ್ನು ಪ್ರತಿಯೊಬ್ಬ ಸುಸ್ತಿದಾರರೂ ಸಹಕಾರಿ ಸಂಘಗಳಿಗೆ ಸಲ್ಲಿಸಬೇಕಾಗುತ್ತದೆ. ಸುಸ್ತಿದಾರರು ಎರಡೆರಡು ಸಹಕಾರಿ ಸಂಘಗಳಲ್ಲಿ ಸಾಲ ಮನ್ನಾ ಸೌಲಭ್ಯ ಪಡೆಯುವ ಬಗ್ಗೆ ಅಡ್ಡ ಪರಿಶೀಲನೆ ನಡೆಸಲು ಇದು ಅನಿವಾರ್ಯ. ಈ ಬಾರಿ ಪ್ಯಾನ್‌ಕಾರ್ಡನ್ನು ಕಡ್ಡಾಯಗೊಳಿಸಲು ಸಹಕಾರ ಸಂಘಗಳ ಇಲಾಖೆ ತೀರ್ಮಾನಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯಾವುದಾದರೂ ಒಂದು ವರ್ಷ ಆದಾಯ ತೆರಿಗೆ ಪಾವತಿಸಿದಲ್ಲಿ ಅಂತಹ ರೈತರಿಗೆ ಸಾಲ ಮನ್ನಾ ಇರುವುದಿಲ್ಲ. ಆದಾಯ ತೆರಿಗೆ ಪಾವತಿ ಬಗ್ಗೆ ಪರಿಶೀಲಿಸಬೇಕಾದರೆ ಪ್ಯಾನ್‌ ಕಾರ್ಡನ್ನು ಸುಸ್ತಿದಾರ ರೈತ ಹಾಜರುಪಡಿಸಲೇಬೇಕು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರೈತರು ಪ್ಯಾನ್‌ ಕಾರ್ಡನ್ನು ಮಾಡಿಸಿಯೇ ಇಲ್ಲ. ಹಾಗಾಗಿ ಸಾಲ ಮನ್ನಾ ಸೌಲಭ್ಯ ಅರ್ಹತೆ ಇದ್ದರೂ ಎಲ್ಲ ರೈತರಿಗೆ ಸಿಗುವುದು ಅಸಂಭವ ಎನ್ನುವುದು ಸಹಕಾರಿ ಸಂಘಗಳ ಅಭಿಪ್ರಾಯ.

ಸುಸ್ತಿದಾರರ ಹೆಸರು ಬಹಿರಂಗ!

ಸಾಲ ಮನ್ನಾ ಸೌಲಭ್ಯ ಪಡೆಯುವ ಸುಸ್ತಿದಾರರ ಹೆಸರನ್ನು ಆಯಾ ಸಹಕಾರಿ ಸಂಘಗಳ ಸೂಚನಾ ಫಲಕದಲ್ಲಿ ಪ್ರದರ್ಶಿಸುವಂತೆ ಸಹಕಾರ ಇಲಾಖೆ ಸೂಚನೆ ನೀಡಿದೆ. ಆದರೆ ಸುಸ್ತಿದಾರರು ಠೇವಣಿ ಇರಿಸಿದ ಮೊತ್ತದ ವಿವರವನ್ನು ಪ್ರದರ್ಶಿಸಬೇಕು ಎಂಬ ಆದೇಶವನ್ನು ಇಲಾಖೆ ಹಿಂಪಡೆದಿದೆ. ಸಾಲಗಾರ ರೈತರ ಹೆಸರನ್ನು ಬಹಿರಂಗವಾಗಿ ಪ್ರದರ್ಶಿಸುವುದು ನಿಯಮಕ್ಕೆ ವಿರುದ್ಧವಾದದ್ದು. ಆದರೆ ಸಾಲ ಮನ್ನಾ ವಿಚಾರದಲ್ಲಿ ನಿಯಮಕ್ಕೆ ವ್ಯತಿರಿಕ್ತವಾಗಿ ಸರ್ಕಾರವೇ ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ಈ ಬಗ್ಗೆ ಸಹಕಾರ ಇಲಾಖೆಯಿಂದ ಮಂಗಳವಾರ ಸುತ್ತೋಲೆ ಬಂದಿದೆ ಎನ್ನುತ್ತಾರೆ ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್‌ ಉಪ್ಪಂಗಳ.

ಸಾಲ ಮನ್ನಾ ಬಗ್ಗೆ ಸರ್ಕಾರದ ಆದೇಶ ಬಂದಿದೆ. ಕಳೆದ ಅವಧಿಯಲ್ಲಿ ಸಾಲ ಮನ್ನಾ ಸಂದರ್ಭ ಆಧಾರ್‌ ಕಾರ್ಡನ್ನು ಕೇಳಲಾಗಿತ್ತು. ಈ ಬಾರಿ ಆಧಾರ್‌ ಜೊತೆಗೆ ಪ್ಯಾನ್‌ಕಾರ್ಡ್‌ ಕಡ್ಡಾಯಗೊಳಿಸಿದ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ. ಸಾಲ ಮನ್ನಾ ಕುರಿತ ಆಡಳಿತಾತ್ಮಕ ಮಾರ್ಗಸೂಚಿ ಸಹಕಾರ ಇಲಾಖೆಯಿಂದ ಇನ್ನಷ್ಟೆಬರಬೇಕು.

-ಬಿ.ಕೆ.ಸಲೀಂ, ಉಪನಿಬಂಧಕ, ಸಹಕಾರ ಇಲಾಖೆ, ದಕ್ಷಿಣ ಕನ್ನಡ.

ಆತ್ಮಭೂಷಣ್‌