ಬೆಂಗಳೂರು[ಜು.07]: ಮೈತ್ರಿ ಸರ್ಕಾರ ಪತನದ ಪ್ರಹಸನ ತುತ್ತತುದಿ ಮುಟ್ಟಿರುವ ಈ ಹಂತದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವುದೊಂದೇ ಈ ಮೈತ್ರಿ ಸರ್ಕಾರವನ್ನು ಉಳಿಸಲು ಇರುವ ಏಕೈಕ ದಾರಿ ಎಂಬ ಚಿಂತನೆಯನ್ನು ಸಿದ್ದರಾಮಯ್ಯ ಅವರ ಆಪ್ತ ಬಣ ಹರಿಬಿಟ್ಟಿದೆ.

ಕಾಂಗ್ರೆಸ್‌ನ ಅತೃಪ್ತ ಶಾಸಕರ ದೂರು ಇರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ. ಕುಮಾರಸ್ವಾಮಿ ಅವರನ್ನು ಪದಚ್ಯುತಗೊಳಿಸಿ ಆ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಸೂಚಿಸಿದರೆ ಕುಸಿದುಬೀಳುವ ಹಂತದಲ್ಲಿರುವ ಮೈತ್ರಿ ಸರ್ಕಾರ ಉಸಿರು ಹಿಡಿಯಬಹುದು. ಆದರೆ, ಇದಕ್ಕೆ ಜೆಡಿಎಸ್‌ ನಾಯಕತ್ವವೂ ಒಪ್ಪಬೇಕು. ಇದೊಂದೇ ಮೈತ್ರಿ ಸರ್ಕಾರ ಉಳಿಸಲು ಇರುವ ದಾರಿ ಎಂದು ಸಿದ್ದು ಬಣ ಬಿಂಬಿಸುತ್ತಿದ್ದು, ಇಂತಹದ್ದೊಂದು ಸಾಧ್ಯತೆಗೆ ತನ್ನನ್ನು ತಾನು ತೆರೆದುಕೊಳ್ಳುವಂತೆ ಜೆಡಿಎಸ್‌ ನಾಯಕತ್ವಕ್ಕೆ ಪರೋಕ್ಷವಾಗಿ ಆಫರ್‌ ನೀಡಿದೆ ಎಂದು ತಿಳಿದುಬಂದಿದೆ.

ಈ ಆಫರ್‌ ಪ್ರಕಾರ - ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಪಕ್ಷದ ನಾಯಕತ್ವಕ್ಕೆ ಹಿಂತಿರುಗುವುದು. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಹುದ್ದೆ ಹಾಗೂ ಎಚ್‌.ಡಿ. ರೇವಣ್ಣ ಅವರಿಗೆ ಡಿಸಿಎಂ ಪದವಿ ನೀಡುವುದು. ಜತೆಗೆ, ಹಾಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಎಲ್ಲಾ ಸಚಿವರಿಂದ ರಾಜೀನಾಮೆ ಪಡೆದು ಅತೃಪ್ತರಿಗೆ ಈ ಹುದ್ದೆಗಳನ್ನು ನೀಡುವ ಭರವಸೆ ನೀಡುವುದು. ಇದಕ್ಕೆ ಜೆಡಿಎಸ್‌ ಒಪ್ಪಿದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತದೆ. ಇಲ್ಲದಿದ್ದರೆ, ಸರ್ಕಾರ ಪತನ ಖಚಿತ. ಏಕೆಂದರೆ, ಬಿಜೆಪಿಯತ್ತ ಸಾಗಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಮನವೊಲಿಸಲು ಬೇರೆ ಯಾವ ದಾರಿಯೂ ಇಲ್ಲ.

ಸಿದ್ದು ಬಣ ಇಂತಹದ್ದೊಂದು ಪ್ರಸ್ತಾವನೆಯನ್ನು ಪರೋಕ್ಷವಾಗಿ ಜೆಡಿಎಸ್‌ ಮುಂದಿಡಲು ಕಾರಣ ಕಾಂಗ್ರೆಸ್‌ ಅತೃಪ್ತ ಶಾಸಕರ ದಂಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಸಿದ್ದರಾಮಯ್ಯ ಆಪ್ತ ಶಾಸಕರು. ಈ ಪೈಕಿ ಬೈರತಿ ಬಸವರಾಜು, ಎಸ್‌.ಟಿ. ಸೋಮಶೇಖರ್‌, ಮುನಿರತ್ನ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದರೆ ತಮ್ಮ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆಯೇ ಹೆಚ್ಚು.

ಇನ್ನು ರಮೇಶ್‌ ಜಾರಕಿಹೊಳಿ ನೇತೃತ್ವದ ಅತೃಪ್ತರ ತಂಡದಲ್ಲಿರುವ ಬಿ.ಸಿ. ಪಾಟೀಲ್‌, ಶಿವರಾಮ್‌ ಹೆಬ್ಬಾರ್‌, ಪ್ರತಾಪ್‌ ಗೌಡ ಪಾಟೀಲ್‌ ಅವರು ಸಹ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದರೆ ತಮ್ಮ ನಿರ್ಧಾರ ಬದಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಸಿದ್ದರಾಮಯ್ಯ ಅವರ ಬಗ್ಗೆಯೇ ಅತೃಪ್ತಿಗೊಂಡಿರುವ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಸಹ ಮನವೊಲಿಸುವ ಸಾಮರ್ಥ್ಯ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ.

ಏಕೆಂದರೆ, ರಾಮಲಿಂಗಾರೆಡ್ಡಿ ಅವರು ಅಸಮಾಧಾನಗೊಳ್ಳಲು ಮುಖ್ಯ ಕಾರಣ ಲೋಕಸಭೆ ಚುನಾವಣೆ ನಂತರ ಸಂಪುಟಕ್ಕೆ ನಿಮ್ಮನ್ನು ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಯನ್ನು ಈಡೇರಿಸಲಿಲ್ಲ ಎಂಬುದು. ಪ್ರಸ್ತುತ ರಾಮಲಿಂಗಾರೆಡ್ಡಿ ಅವರಿಗೆ ಪಕ್ಷದಲ್ಲಿ ಯಾವುದೇ ಗಾಡ್‌ ಫಾದರ್‌ ಇಲ್ಲ. ಸಿದ್ದರಾಮಯ್ಯ ಸಹ ಮಾತು ತಪ್ಪಿದ್ದರಿಂದ ಅವರ ಬಗ್ಗೆ ನಂಬಿಕೆ ಹೊಂದಿದ್ದ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್‌ನಲ್ಲಿ ತಮ್ಮ ಹಿತ ಕಾಯುವ ಯಾವ ನಾಯಕರೂ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಹೈಕಮಾಂಡ್‌ ಮಟ್ಟದಲ್ಲಿ ತಮ್ಮ ಪರ ಲಾಬಿ ನಡೆಸುವ ಪ್ರಬಲ ನಾಯಕತ್ವದ ಬೆಂಬಲವಿಲ್ಲದಿದ್ದರೆ ತಮ್ಮ ಹಾಗೂ ತಮ್ಮ ಪುತ್ರಿಯ ರಾಜಕೀಯ ಭವಿಷ್ಯ ನಿರ್ಮಾಣ ಕಷ್ಟಎಂಬುದು ರಾಮಲಿಂಗಾರೆಡ್ಡಿ ಭಾವನೆ ಎನ್ನಲಾಗಿದೆ.

ಇದಿಷ್ಟೇ ಅಲ್ಲದೆ, ನಗರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜು, ಗೋಪಾಲಯ್ಯ ಮೊದಲಾದವರು ರಾಜೀನಾಮೆ ಸಲ್ಲಿಸಲು ಮುಂದಾಗುವುದರ ಹಿಂದೆ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಪ್ರಧಾನ ಪಾತ್ರ ವಹಿಸಿದೆ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಅವರು ನಾಯಕತ್ವ ವಹಿಸಿಕೊಂಡು ಬಿಜೆಪಿಯ ಬೆಂಗಳೂರು ನಗರದ ಪ್ರಬಲ ನಾಯಕ ಆರ್‌.ಅಶೋಕ್‌ ಅವರ ಬೆಂಬಲ ಪಡೆದಿದ್ದರಿಂದಲೇ ಈ ಶಾಸಕರು ರಾಜೀನಾಮೆಗೆ ಒಪ್ಪಿದರು ಎಂದು ಹೇಳಲಾಗುತ್ತಿದೆ.

ಈ ಶಾಸಕರು (ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜು) ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅತಿ ಹೆಚ್ಚಿನ ಅನುದಾನವನ್ನು ತಮ್ಮ ಕ್ಷೇತ್ರಗಳಿಗೆ ಪಡೆದುಕೊಂಡಿದ್ದರು. ಇದೇ ರೀತಿಯ ಅನುದಾನವನ್ನು ಅವರು ಈ ಬಾರಿ ಕುಮಾರಸ್ವಾಮಿ ಸರ್ಕಾರದಿಂದಲೂ ಬಯಸಿದ್ದರು. ಆದರೆ, ಕುಮಾರಸ್ವಾಮಿ ಈ ಶಾಸಕರಿಗೆ ಹೆಚ್ಚಿನ ಸೊಪ್ಪು ಹಾಕಿಲ್ಲ. ಇದೇ ಅವರ ಅಸಮಾಧಾನಕ್ಕೆ ಮೂಲ ಕಾರಣ. ಇಂತಹ ಶಾಸಕರಿಗೆæ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಖಚಿತವಾದರೆ, ತಮ್ಮ ನಿರ್ಧಾರ ಪುನರ್‌ ಪರಿಶೀಲಿಸಬಹುದು.

ಒಂದು ವೇಳೆ ಈ ಶಾಸಕರು ತಮ್ಮ ರಾಜೀನಾಮೆ ನಿರ್ಧಾರ ಹಿಂಪಡೆದರೆ ಆಗ ರಾಮಲಿಂಗಾರೆಡ್ಡಿ ಅವರು ಒಂಟಿಯಾಗುತ್ತಾರೆ. ಅಲ್ಲದೆ, ಈ ಶಾಸಕರು ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವ ರಿವರ್ಸ್‌ ಆಪರೇಷನ್‌ ನಡೆಸಬಹುದು. ಇದಕ್ಕೆ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯ ರೆಡ್ಡಿ ಒಪ್ಪುವ ಸಾಧ್ಯತೆಯೇ ಹೆಚ್ಚು ಎಂದು ಸಿದ್ದು ಬಣ ವಾದಿಸುತ್ತಿದೆ.

ಹೀಗೆ ಬೆಂಗಳೂರಿನ ಐದು ಹಾಗೂ ಮೂಲ ಅತೃಪ್ತರ ಬಣದಲ್ಲಿದ್ದ ಮೂರು ಶಾಸಕರು ತಮ್ಮ ನಿರ್ಧಾರ ಹಿಂಪಡೆದರೆ ಪ್ರಸ್ತುತ ರಾಜೀನಾಮೆ ನೀಡಿ ಬಿಜೆಪಿಯತ್ತ ಸಾಗುವ ಚಿಂತನೆಯಲ್ಲಿರುವ ಕಾಂಗ್ರೆಸ್‌-ಜೆಡಿಎಸ್‌ನ ಇನ್ನಷ್ಟುಶಾಸಕರು ತೆಪ್ಪಗಾಗಬಹುದು. ಇಷ್ಟಾದಲ್ಲಿ ಮೈತ್ರಿ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳುವ ಅತೃಪ್ತರ ಯೋಜನೆ ಮತ್ತೆ ವಿಫಲವಾಗುತ್ತದೆ ಎಂಬುದು ಸಿದ್ದು ಆಪ್ತರ ವಾದ.

ಮೂಲಗಳ ಪ್ರಕಾರ ಇಂತಹದ್ದೊಂದು ಪ್ರಸ್ತಾವನೆಯನ್ನು ಸಿದ್ದು ಬಣ ಈಗಾಗಲೇ ಜೆಡಿಎಸ್‌ ನಾಯಕರಿಗೆ ನೀಡಿದೆ. ಆದರೆ, ಇದಕ್ಕೆ ಜೆಡಿಎಸ್‌ನ ಪ್ರತಿಕ್ರಿಯೆ ಹೇಗಿದೆ ಎಂಬುದು ಗೊತ್ತಾಗುತ್ತಿಲ್ಲ. ಬಹುತೇಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನಗರಕ್ಕೆ ಹಿಂತಿರುಗಿದ ನಂತರ ಈ ದಿಸೆಯಲ್ಲಿ ಬೆಳವಣಿಗೆ ನಡೆಯಬಹುದು ಎನ್ನಲಾಗುತ್ತಿದೆ.

ಏನಿದು ಆಫರ್‌?

- ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಜೆಡಿಎಸ್‌ ನಾಯಕತ್ವ ವಹಿಸುವುದು

- ಕಾಂಗ್ರೆಸ್‌ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರಿಗೆ ಸಿಎಂ ಹುದ್ದೆ ನೀಡುವುದು

- ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಉಪಮುಖ್ಯಮಂತ್ರಿ ಮಾಡುವುದು

- ಕಾಂಗ್ರೆಸ್‌, ಜೆಡಿಎಸ್‌ ಹಾಲಿ ಸಚಿವರ ರಾಜೀನಾಮೆ ಪಡೆದು ಅತೃಪ್ತರಿಗೆ ನೀಡುವುದು

- ಇದಕ್ಕೆ ಒಪ್ಪಿದರೆ ಸರ್ಕಾರ ಉಳಿಯುತ್ತದೆ. ಇಲ್ಲವಾದಲ್ಲಿ, ಮೈತ್ರಿ ಸರ್ಕಾರ ಪತನ ಖಚಿತ

- ಬಿಜೆಪಿಯತ್ತ ಸಾಗಿರುವ ಅತೃಪ್ತರನ್ನು ಉಳಿಸಲು ಬೇರೆ ಯಾವ ದಾರಿಯೂ ಇಲ್ಲ