ಸೋಮವಾರ ಸಂಜೆ ನಾಪತ್ತೆ, ಬುಧವಾರ ಮುಂಜಾನೆ ಶವವಾಗಿ ಪತ್ತೆಯಾದ್ರು ಕಾಫಿ ಧಣಿ| ಬದುಕಿ ಬರಲಿ ಎಂದು ಹಾರೈಸಿದರವರಿಗೆಲ್ಲಾ ಆಘಾತ| ಮೃತದೇಹ ಪತ್ತೆಯಾದ ಬೆನ್ನಲ್ಲೇ ಗರಿಗೆದರಿದ ಸಾವಿಗೆ ಕಾರಣವಾದ ನಿಗೂಢ ಕಾರಣ| ಸೂಕ್ತ ತನಿಖೆ ನಡೆಸಿ ಎಂದು ಆಗ್ರಹಿಸಿದ ನಾಯಕರು

ಬೆಂಗಳೂರು[ಜು.31]: ಸೋಮವಾರ ಸಂಜೆ ನೇತ್ರಾವತಿ ನದಿ ತೀರದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಕಾಫಿ ಡೇ ಮಾಲೀಕ ವಿ. ಜಿ. ಸಿದ್ಧಾರ್ಥ ಇಂದು ಮುಂಜಾನೆ ಉಳ್ಳಾಲ ಸೇತುವೆಯಿಂದ ಸುಮಾರು 4 ಕಿ. ಮೀಟರ್ ದೂರದಲ್ಲಿ ನೇತ್ರಾವತಿ ನದಿಯ ಹಿನ್ನೀರಿನ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಸಿದ್ಧಾರ್ಥ ಮರಳಿ ಬರುತ್ತಾರೆಂದು ಕನಸಿಟ್ಟುಕೊಂಡಿದ್ದ ಎಲ್ಲರಿಗೂ ಭಾರೀ ಆಘಾತ ಎದುರಾಗಿದೆ. ಆದರೀಗ ಸಿದ್ಧಾರ್ಥ ಸಾವಿನ ಬೆನ್ನಲ್ಲೇ ಹಲವಾರು ಅನುಮಾನಗಳು ಗರಿಗೆದರಿದ್ದು, ಅವರ ಸಾವಿಗೆ ಬೇರೆ ಕಾರಣವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಮಾಜಿ ಪಿಎಂ ದೇವೇಗೌಡರು ಸೇರಿದಂತೆ ಹಲವಾರು ನಾಯಕರು ಸಿದ್ಧಾರ್ಥ ಸಾವಿನ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

"

ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

ಹೌದು ನಾಪತ್ತೆಯಾದ ಬಳಿಕ ಸಿದ್ಧಾರ್ಥ ಬರೆದಿದ್ದಾರೆನ್ನಲಾದ ಪತ್ರವೊಂದು ವೈರಲ್ ಆಗಿತ್ತು. ಈ ಪತ್ರದಲ್ಲಿ ಐಟಿ ಇಲಾಖೆಯ ವಿರುದ್ಧ ಹಲವಾರು ಆರೋಪಗಳನ್ನು ಮಾಡಲಾಗಿತ್ತು. ಹೀಗಾಗಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನದೊಂದಿಗೆ, ಐಟಿ ಅಧಿಕಾರಿಗಳು ಕಿರುಕುಳ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೀಗ ಸಿದ್ಧಾರ್ಥ ಶವವಾಗಿ ಪತ್ತೆಯಾದ ಬಳಿಕ ಈ ಅನುಮಾನ ಮತ್ತಷ್ಟು ದಟ್ಟವಾಗಿದೆ.

Scroll to load tweet…

ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ 'ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಸಾವು ಎಷ್ಟು ಎಷ್ಟು ದಾರುಣವೋ, ಅದರ ಹಿನ್ನೆಲೆ ಅಷ್ಟೇ ನಿಗೂಢವಾದುದು. ಅವರನ್ನು ಇಂತಹದ್ದೊಂದು ದುರಂತಕ್ಕೆ‌ ತಳ್ಳಿದ ಕಾರಣಗಳು ಮತ್ತು ಅದರ ಹಿಂದಿನ‌ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ' ಎಂದಿದ್ದಾರೆ.

Scroll to load tweet…

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆಯ ಕಿರುಕುಳ ಕಾರಣವಾಗಿರ ಬಹುದೆಂಬ ಸಂಶಯ ಹುಟ್ಟಿಸುವಂತಿದೆ‌ ಅವರು ಕೊನೆಯಲ್ಲಿ ಬರೆದಿರುವ ಪತ್ರದಲ್ಲಿನ ವಿವರಗಳು. ಕಳೆದ ಐದು ವರ್ಷಗಳಲ್ಲಿ ಐಟಿ ಇಲಾಖೆಯ ಕಾರ್ಯನಿರ್ವಹಣೆ ಈ ಸಂಶಯವನ್ನು ಇನ್ನಷ್ಟು ಪುಷ್ಠೀಕರಿಸುತ್ತದೆ. ಈ ಬಗ್ಗೆ‌‌‌ ನಿಷ್ಪಕ್ಷಪಾತ ತನಿಖೆ ಆಗಲೇಬೇಕು' ಎಂದು ಒತ್ತಾಯಿಸಿದ್ದಾರೆ.

Scroll to load tweet…

ಅತ್ತ ಮಾಜಿ ಪ್ರಧಾನಿ ದೇವೇಗೌಡರೂ ಕಾಫಿ ಡೇ ಮಾಲಿಕನ ಸಾವಿನ ಸಂಬಂಧ ಅನುಮಾನ ವ್ಯಕ್ತಪಡಿಸಿದ್ದು, ’ದಾರುಣ ಸಾವಿನ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ’ ಎಂದು ಆಗ್ರಹಿಸಿದ್ದಾರೆ.

ಎರಡು ದಿನಗಳ ಹಿಂದೆ ಡಿಕೆಶಿಗೆ ಕರೆ ಮಾಡಿದ್ದ ಸಿದ್ಧಾರ್ಥ!

ಇದರ ಬೆನ್ನಲ್ಲೇ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೂಡಾ ಸಿದ್ಧಾರ್ಥ ನಿಗೂಢ ಸಾವಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು 'ಉದ್ಯಮಿಗಳು ದೇಶದಲ್ಲಿ ಇರಬೇಕೋ, ಬೇಡವೋ? ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಏನು ಹೇಳುವುದು? ಆಕಸ್ಮಿಕ ಮರಣ ಹೊಂದಿದ್ದಾರೆ. ಮೂರ್ನಾಲ್ಕು ಉದ್ಯಮಿಗಳು ಹೀಗೆ ಆಗಿದೆ. ಹೀಗಾಗಿ ಹೊಸ ಉದ್ಯಮಿಗಳಿಗೆ ಆತಂಕ ಮೂಡಿಸಿದೆ. ದೇಶದಲ್ಲಿ ಉದ್ಯಮಗಳು ಕಡಿಮೆಯಾದರೆ ಉದ್ಯೋಗಾವಕಾಶ ಕಡಿಮೆ ಆಗುತ್ತದೆ. ಬಂಡವಾಳ ಹೂಡಿಕೆ ವೇಳೆ ಚಿಕ್ಕ ಪುಟ್ಟ ಸಮಸ್ಯೆಗಳಿರುತ್ತದೆ, ಆದರೆ ಅದೇ ಸಮಸ್ಯೆಗಳನ್ನು ದೊಡ್ಡದು ಮಾಡಿ ಅಪಾಯ ತರುವ ಹಂತಕ್ಕೆ ಹೊಗಬಾರದು. ಕೆಲವು ಕಾನೂನಿನ ಚೌಕಟ್ಟುಗಳು ಇಂತಹ ಸ್ಥಿತಿಗೆ ಕಾರಣ’ ಎಂದಿದ್ದಾರೆ.

Scroll to load tweet…

ಸಿದ್ಧಾರ್ಥರವರ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಕೂಡಾ ಮಂಗಳವಾರದಂದು ಪತ್ರ ವೈರಲ್ ಆದ ಬೆನ್ನ್ಲಲೇ ಟ್ವೀಟ್ ಮಾಡುತ್ತಾ 'ಜುಲೈ 27ರಂದು ವಿ. ಜಿ. ಸಿದ್ಧಾರ್ಥ ಬರೆದಿರುವ ಪತ್ರ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದಾದ ಒಂದು ದಿನದ ಬಳಿಕ ಜುಲೈ 28ರಂದು ಸಿದ್ಧಾರ್ಥ ನನಗೆ ಕರೆ ಮಾಡಿ ಭೇಟಿ ಮಾಡಬಹುದೇ ಎಂದು ಕೇಳಿದ್ದರು. ಹೀಗಿರುವಾಗ ಇಂತಹ ಧೈರ್ಯವಂತ ವ್ಯಕ್ತಿ ಹೀಗೆ ಮಾಡಲು ಸಾಧ್ಯವೇ ಎಂದು ನನ್ನಿಂದ ನಂಬಲಾಗುತ್ತಿಲ್ಲ. 'ಈ ಪ್ರಕರಣ ಅನುಮಾನಾಸ್ಪದವಾಗಿದೆ. ಹೀಗಾಗಿ ತನಿಖೆ ನಡೆಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಸಿದ್ಧಾರ್ಥ ಹಾಗೂ ಅವರ ಕುಟುಂಬವನ್ನು ನಾನು ದಶಕಕ್ಕೂ ಹೆಚ್ಚು ಸಮಯದಿಂದ ಬಲ್ಲೆ' ಎಂದಿದ್ದರು.

ಎರಡು ದಿನಗಳ ಹಿಂದೆ ಡಿಕೆಶಿಗೆ ಕರೆ ಮಾಡಿದ್ದ ಸಿದ್ಧಾರ್ಥ!

ಸಿದ್ಧಾರ್ಥ ನಾಪತ್ತೆಯಾದಾಗಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಕಂಪು ಪಸರಿಸಿದ್ದ, ಹಲವರ ಬಾಳನ್ನು ಹಸನಾಗಿಸಿದ್ದ ಕಾಫಿ ಧಣಿ ಮರಳಿ ಬರಲಿ ಎಂದು ಇಡೀ ಕರುನಾಡೇ ಹಾರೈಸಿತ್ತು. ಆದರೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ. ತಮ್ಮ ಹಿಂದೆ ಹಲವಾರು ನಿಗೂಢ ಪ್ರಶ್ನೆಗಳನ್ನು ಬಿಟ್ಟು ತೆರಳಿದ್ದಾರೆ. ತನಿಖೆಯ ಬಳಿಕವೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.