Asianet Suvarna News Asianet Suvarna News

ಬಿಎಸ್‌ವೈ 4 ಕೋಟಿ ಹಗರಣ: ಮೋದಿ, ಶಾ ವಿರುದ್ಧ ಸಿದ್ದು ಕಿಡಿ

ಮುಖ್ಯಮಂತ್ರಿಯಾಗಿದ್ದಾಗಲೇ ಜೈಲಿಗೆ ಹೋದ ಹಾಗೂ ಚೆಕ್‌ ಮೂಲಕ ಲಂಚ ಪಡೆದ ಯಡಿಯೂರಪ್ಪ ಅವರ ಮತ್ತೊಂದು ಹಗರಣ ಬಯಲಾಗಿದೆ.

CM Slams BS Yeddyurappa

ಬೆಂಗಳೂರು : ಮುಖ್ಯಮಂತ್ರಿಯಾಗಿದ್ದಾಗಲೇ ಜೈಲಿಗೆ ಹೋದ ಹಾಗೂ ಚೆಕ್‌ ಮೂಲಕ ಲಂಚ ಪಡೆದ ಯಡಿಯೂರಪ್ಪ ಅವರ ಮತ್ತೊಂದು ಹಗರಣ ಬಯಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 4 ಕೋಟಿ ರು. ಲಂಚ ಪಡೆದಿರುವುದನ್ನು ಐಟಿ ಇಲಾಖೆಯೇ ಪತ್ತೆ ಹಚ್ಚಿ ನೋಟಿಸ್‌ ನೀಡಿದೆ. ಇಂಥವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ನಮ್ಮ ಮೇಲೆ ಆರೋಪ ಮಾಡಲು ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮಾನ, ಮರ್ಯಾದೆ ಎಂಬುದು ಇಲ್ಲ. ರಾಜ್ಯಕ್ಕೆ ಬಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಹೋಗಿದ್ದಾರೆ.

ಯಡಿಯೂರಪ್ಪ ಅವರಂತಹ ಭ್ರಷ್ಟನನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಇದೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 4 ಕೋಟಿ ರು. ಲಂಚ ಪಡೆದಿರುವುದು ಬಯಲಾಗಿದೆ. ಸ್ವತಃ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಆದಾಯ ತೆರಿಗೆ ಇಲಾಖೆಯೇ ಹಗರಣವನ್ನು ಪತ್ತೆ ಹಚ್ಚಿ ನೋಟಿಸ್‌ ಜಾರಿ ಮಾಡಿದೆ. ಇದರ ದಂಡವನ್ನೂ ಯಡಿಯೂರಪ್ಪ ತೆತ್ತಿದ್ದು ಅಮಿತ್‌ ಶಾ ಹಾಗೂ ನರೇಂದ್ರ ಮೋದಿ ಇದಕ್ಕೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಎಸ್‌ಸಿ/ಎಸ್‌ಟಿ ಕಾಯ್ದೆ ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ದಲಿತರು ಹಾಗೂ ಶೋಷಿತರಿಗೆ ಬಿಜೆಪಿ ಮಾಡುತ್ತಿರುವ ಅತಿ ದೊಡ್ಡ ದ್ರೋಹ ಎಂದು ಕಿಡಿ ಕಾರಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತೇನೆ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಅವರ ಮಿಷನ್‌-150 ಈಗ ಬರೀ 50ಕ್ಕೆ ಇಳಿದಿದೆ. ದೇಶದ ರಾಜಕೀಯ ದೃಷ್ಟಿಯಿಂದ ಹಾಗೂ ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಮೇ - 12ರ ಚುನಾವಣೆ ಮಹತ್ವದ್ದು. ಹೀಗಾಗಿ ಒಟ್ಟಾಗಿ ಮತ ಚಲಾಯಿಸಿ ಎಲ್ಲಾ ವರ್ಗಗಳ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಜೆಡಿಎಸ್‌ ಸೋಲಿಸಿ: ಜೆಡಿಎಸ್‌ ಪಕ್ಷವು ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರು. ಅವರು ಬಿಜೆಪಿ ಜತೆ ಸೇರಿಕೊಳ್ಳಲು ಕಾಯುತ್ತಿದ್ದಾರೆ. ಜೆಡಿಎಸ್‌ಗೆ ಕೊಡುವ ಪ್ರತಿಯೊಂದು ಮತ ಕೋಮುವಾದಿ ಪಕ್ಷ ಬಿಜೆಪಿಗೆ ನೀಡಿದಂತೆ. ಹೀಗಾಗಿ ಜೆಡಿಎಸ್‌ನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಎಚ್‌.ಡಿ. ಕುಮಾರಸ್ವಾಮಿ ತಾವು ಅಧಿಕಾರಕ್ಕೆ ಬಂದರೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಕುಮಾರಸ್ವಾಮಿ ನೀವು 20 ತಿಂಗಳು ಸಿಎಂ ಆಗಿದ್ದೀರಿ. ನಿಮ್ಮ ತಂದೆ ಸಿಎಂ ಹಾಗೂ ಪಿಎಂ ಆಗಿದ್ದರು. ಆಗ ಯಾಕೆ ಮಾಡಲಿಲ್ಲ. ಆಗ ಮಣ್ಣಿನ ಮಕ್ಕಳು ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದ ನೀವು ಅಧಿಕಾರದಲ್ಲಿದ್ದರೂ ಏಕೆ ರೈತರ ಸಾಲ ಮನ್ನಾ ಮಾಡಲಿಲ್ಲ. ನಿಮ್ಮ ಮೊಸಳೆ ಕಣ್ಣೀರನ್ನು ಜನ ನಂಬುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಾವು ಶ್ರಮಿಸಿದ್ದೇವೆ. ಬಿಜೆಪಿ ಹಾಳು ಮಾಡಿದ್ದ ಬೆಂಗಳೂರನ್ನು ಮತ್ತೆ ಹಳೆಯ ವೈಭವಕ್ಕೆ ತಂದಿದ್ದೇವೆ. ಬೆಂಗಳೂರಿನಲ್ಲಿ ಕಳೆದ ಬಾರಿ 28 ರಲ್ಲಿ 13 ಕ್ಷೇತ್ರಗಳಲ್ಲಿ ಗೆದ್ದಿದ್ದೆವು. ಈ ಬಾರಿ 25 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದೆ. ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಹಾಗೂ ಎಲ್ಲಾ ವರ್ಗದವರಿಗೂ ಉಚಿತ ಲ್ಯಾಪ್‌ಟಾಪ್‌ ನೀಡಿದ್ದೇವೆ. ಒಣ ಬೇಸಾಯ ಮಾಡುತ್ತಿರುವ 70 ಲಕ್ಷ ರೈತ ಕುಟುಂಬಗಳಿಗೆ ಪ್ರತಿ ಹೆಕ್ಟೇರ್‌ಗೆ 5-10 ಸಾವಿರ ರು. ಪರಿಹಾರ ನೀಡಲು ಕ್ರಮ ಕೈಗೊಂಡಿದ್ದೇವೆ ಎಂದರು. ಈ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios