ಸಿಎಂ ಸಿದ್ರಾಮಯ್ಯ ಗ್ರಹಚಾರ ಸರಿ ಇಲ್ಲವಾ? ಏಕಾಂಗಿ ಆಗಿ ಹೋದರಾ? ಹೌದು ಅಂತಿದ್ದಾರೆ ಮೈಸೂರು ಭಾಗದ ಕಾಂಗ್ರೆಸ್ ಮುಖಂಡರು. ಯಾಕೆಂದರೆ ಪುತ್ರ ರಾಕೇಶ್ ಕಾಲವಾದ ಮೇಲೆ ನಂಬಿಕಸ್ತರೆಲ್ಲರೂ ಸಿದ್ದರಾಮಯ್ಯರಿಂದ ದೂರ ಆಗುತ್ತಿದ್ದಾರೆ. ಇದರಿಂದಾಗಿ ಮೈಸೂರು-ಚಾಮರಾಜನಗರ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬುಡವೇ ಅಲುಗಾಡುವಂತಾಗಿದೆ.
ಬೆಂಗಳೂರು(ಜ.04): ಸಿಎಂ ಸಿದ್ರಾಮಯ್ಯ ಗ್ರಹಚಾರ ಸರಿ ಇಲ್ಲವಾ? ಏಕಾಂಗಿ ಆಗಿ ಹೋದರಾ? ಹೌದು ಅಂತಿದ್ದಾರೆ ಮೈಸೂರು ಭಾಗದ ಕಾಂಗ್ರೆಸ್ ಮುಖಂಡರು. ಯಾಕೆಂದರೆ ಪುತ್ರ ರಾಕೇಶ್ ಕಾಲವಾದ ಮೇಲೆ ನಂಬಿಕಸ್ತರೆಲ್ಲರೂ ಸಿದ್ದರಾಮಯ್ಯರಿಂದ ದೂರ ಆಗುತ್ತಿದ್ದಾರೆ. ಇದರಿಂದಾಗಿ ಮೈಸೂರು-ಚಾಮರಾಜನಗರ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬುಡವೇ ಅಲುಗಾಡುವಂತಾಗಿದೆ.
ಅಂದು ಪುತ್ರ ರಾಕೇಶ್ ಕಾಲವಾದ: ಇಂದು ಪರಮಾಪ್ತ ಸಚಿವ ಇಲ್ಲವಾದ
ಸಿಎಂ ಸಿದ್ರಾಮಯ್ಯ ದಿನೇ ದಿನೇ ಅತಂತ್ರ ಆಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೆಚ್ಚು ಕಮ್ಮಿ ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಟ್ಟ ಮೇಲೆ ಸಿಎಂ ಸಿದ್ರಾಮಯ್ಯಗೆ ವಕ್ರದೆಸೆ ಶುರುವಾದಂತಿದೆ. ಶ್ರೀನಿವಾಸ ಪ್ರಸಾದ್ ಅಂತೂ ಕಾಂಗ್ರೆಸ್ ಪಕ್ಷಕ್ಕೇ ಗುಡ್ಬೈ ಹೇಳಿ ಸಿದ್ದರಾಮಯ್ಯ ವಿರುದ್ಧವೇ ಹಲ್ಲು ಮಸೆಯುತ್ತಿದ್ದಾರೆ.
ರಾಕೇಶ್ ಕಾಲವಾದ ಮೇಲೆ ಸಿಎಂ ಅತಂತ್ರ!
ಅಸಲಿಗೆ ಸಿಎಂ ಸಿದ್ರಾಮಯ್ಯ ಬೆನ್ನಿಗೆ ರಾಜಕೀಯವಾಗಿ ಆತುಕೊಂಡಿದ್ದವನೆಂದರೆ. ಪುತ್ರ ರಾಕೇಶ್ ಸಿದ್ರಾಮಯ್ಯ ಕಾಲವಾದ ಮೇಲೆ ಮುಖ್ಯಮಂತ್ರಿಗಳ ಜಂಘಾಬಲವೇ ಕುಸಿದು ಹೋಗಿದೆ. ಆಮೇಲೆ ಎರಡನೇ ಪುತ್ರ ಡಾ.ಯತೀಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಉತ್ತರಾಧಿಕಾರಿಯಾಗೋ ಮುನ್ಸೂಚನೆ ಸಿಕ್ರೂ ರಾಕೇಶ್ ರೀತಿ ಬಿರುಸು ಸಿಗುತ್ತಿಲ್ಲ.
ಆಪ್ತ ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ
ಇನ್ನೇನು ಎಲ್ಲವೂ ಸರಿ ಹೋಗುತ್ತಿದ್ದಂತೆ ಸಿದ್ರಾಮಯ್ಯಗೆ ಭಾರೀ ಪೆಟ್ಟು ಕೊಟ್ಟಿದ್ದು ನೋಟ್ ಬ್ಯಾನ್ ಬಿಸಿ. ಸಿಎಂ ಆಪ್ತ ಚಿಕ್ಕರಾಯಪ್ಪ ಹಾಗೂ ಸಚಿವ ಮಹದೇವಪ್ಪ ಆಪ್ತ ಜಯಚಂದ್ರ ಮನೆ ಮೇಲೆ ದಾಳಿಯಿಟ್ಟ ಸಿಬಿಐ ಕೋಟ್ಯಂತರ ಹೊಸ ನೋಟುಗಳನ್ನ ವಶಕ್ಕೆ ಪಡೆಯಿತು. ಇದೀಗ ತನಿಖೆ ಹಾದಿ ಹಳೆ ಮೈಸೂರು ಭಾಗದ ಗಟ್ಟಿ ರಾಜಕಾರಣಿ ಮಹದೇವಪ್ಪ ಕೊರಳಿಗೂ ಸುತ್ತಿಕೊಳ್ಳೋ ಎಲ್ಲಾ ಮುನ್ಸೂಚನೆ ಸಿಕ್ಕಿದೆ. ಅಲ್ಲಿಗೆ ಸಿಎಂ ಮತ್ತೊಬ್ಬ ಆಪ್ತ PWD ಸಚಿವರೂ ದೂರವಾಗುವ ಕಾಲ ಸನಿಹಿತವಾಗಿದೆ.
ರಾಸಲೀಲೆ ಸಿಡಿಯಿಂದ ಮೇಟಿ ತಲೆದಂಡ!
ಇದೇ ಹೊತ್ತಿಗೆ ಬಾಗಲಕೋಟೆಯ ಪ್ರಭಾವಿ ಸಚಿವ ಎಚ್.ವೈ ಮೇಟಿ ರಾಸಲೀಲೆಯಲ್ಲಿ ಸಿಕ್ಕಿಬಿದ್ದರು. ಸ್ವಜಾತಿ.. ಹಿರಿಯ ಮುಖಂಡನ ಪಲ್ಲಂಗದಾಟವೂ ಸಿದ್ದರಾಮಯ್ಯರನ್ನ ಕಾಡಲಾರಂಭಿಸಿತು. ಕಡೆಗೆ ತಲೆದಂಡವೂ ಆಯಿತು.
ಪೂಜಾರಿ, ವಿಶ್ವನಾಥ್ ಬಹಿರಂಗ ‘ಗುದ್ದು’
ಸಿದ್ರಾಮಯ್ಯ ಅಖಿಲ ಭಾರತ ಪ್ರಗತಿಪರ ಜನತಾದಳ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆದಾಗ ಹೆಚ್ಚು ಖುಷಿ ಪಟ್ಟಿದ್ದು ಇದೇ ಎಚ್.ವಿಶ್ವನಾಥ್. ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ. ಆದರೆ, ಈಗ ಇಬ್ಬರೂ ಮುಖ್ಯಮಂತ್ರಿಗಳ ನಡೆಯನ್ನು ಬಹಿರಂಗವಾಗಿ ಟೀಕಿಸಲಾರಂಭಿಸಿದ್ದಾರೆ..
ಬಿಜೆಪಿಗೆ ಶ್ರೀನಿವಾಸ ‘ಪ್ರಸಾದ’
ನನಗೆ ಮಾಹಿತಿ ನೀಡದೆ ವಜಾ ಮಾಡಿದ್ದಾರೆ ಅಂತ ಸಿಎಂ ವಿರುದ್ಧ ಸೆಟೆದು ನಿಂತಿರೋ ಶ್ರೀನಿವಾಸ ಪ್ರಸಾದ್, ನಂಜನಗೂಡು ಬೈ ಎಲೆಕ್ಷನ್ಗೆ ಎದುರಾಗಿದ್ದಾರೆ. ಬಿಜೆಪಿ ಸೇರಿ ಕಾಂಗ್ರೆಸ್ ಅಭ್ಯರ್ಥಿಗೆ ಮಣ್ಣು ಮುಕ್ಕಿಸಿ ಸಿಎಂ ಸಿದ್ರಾಮಯ್ಯಗೆ ಸರಿಯಾದ ಪಾಠ ಕಲಿಸಬೇಕು ಅಂತ ಕಾಯ್ತಿದ್ದಾರೆ.
‘ತೆನೆ’ ಹೊರಲು ಸಜ್ಜಾಗಿದ್ದ ಇಬ್ರಾಹಿಂ ಭೇಟಿ
ಸಿಎಂ ಅತ್ಯಾಪ್ತರಲ್ಲಿ ಒಬ್ಬರು ಸಿ.ಎಂ.ಇಬ್ರಾಹಿಂ ಕೂಡ ಜೆಡಿಎಸ್ ಸೇರಲು ತವಕಿಸುತ್ತಿದ್ದರು. ಈ ಬಗ್ಗೆ ದೇವೇಗೌಡರ ಜೊತೆ ಮಾತುಕತೆಯೂ ನಡೀತಿತು. ಇದನ್ನ ಅರಿತು ಪಕ್ಷಕ್ಕೆ ಆಗೋ ಡ್ಯಾಮೇಜ್ ತಡೆಯಲು ಸಿಎಂ ಸಾಹೇಬ್ರೇ ಇಬ್ರಾಹಿಂ ಮನೆ ಬಾಗಿಲಿಗೆ ಹೋಗಿ ಬಂದಿದ್ದರು.
ಪರಮಾಪ್ತ ಮಹದೇವ ಪ್ರಸಾದ್ ಅಕಾಲಿಕ ಸಾವು
ಇದೆಲ್ಲದರ ಮಧ್ಯೆ ಸಿದ್ದರಾಮಯ್ಯರಿಗೆ ಸುಮಾರು 3 ದಶಕಗಳಿಂದಲೂ ಜೊತೆಯಲ್ಲಿದ್ದ ಎಚ್.ಎಸ್. ಮಹದೇವ ಪ್ರಸಾದ್ ಕೂಡ ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ಮೈಸೂರು-ಚಾಮರಾಜನಗರ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ನಂಬಿಕಸ್ತ ಹಿಂಬಾಲಕರು ಇಲ್ಲದೆ ಏಕಾಂಗಿ ಆಗಿದ್ದಾರೆ.
ಒಟ್ನಲ್ಲಿ ಸಿಎಂ ಸಿದ್ರಾಮಯ್ಯ ಗ್ರಹಚಾರ ಸರಿ ಇದ್ದಂತಿಲ್ಲ. ಆಪ್ತರೆಲ್ಲರೂ ದೂರು ಸರಿಯುತ್ತಿದ್ದಂತೆ ಏಕಾಂಗಿ ಆಗಿ ಹೋದರಾ?ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಕಡೆಯ ದಿನಗಳಿಗೆ ಹತ್ತಿರವಾದರಾ? ಇಂತ ಪ್ರಶ್ನೆಗಳಿಗೆ ಖುದ್ದು ಸಿಎಂ ಉತ್ರ ಕೊಡದೇ ಹೊರತು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಬಿಡುತ್ತವೆ.
