ಪರಮೇಶ್ವರ್ ಬಗ್ಗೆ ಕಾಂಗ್ರೆಸ್ ನಾಯಕರ ಅಸಮಾಧಾನ

CM Lingappa Slams Parameshwar
Highlights

ರಾಮನಗರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಸಲಹೆ ನೀಡಿದ ಪರಮೇಶ್ವರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಅಸಮಾಧಾನ ಹೊರಹಾಕಿದ್ದಾರೆ. ಛಲವೇ ಇಲ್ಲದೇ ಆ ವ್ಯಕ್ತಿ ಪಕ್ಷ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ರಾಮನಗರ :  ಕೊರಟಗೆರೆ ಕ್ಷೇತ್ರದಲ್ಲಿ ಗೆದ್ದು ಉಪಮುಖ್ಯಮಂತ್ರಿಯಾದರು. ಅವರಿಗೆ ಅಷ್ಟೇ ಸಾಕು ಎನಿಸುತ್ತಿದೆ. ಜೀವನದಲ್ಲಿ ಇನ್ನೇನೂ ಬೇಕಾಗಿಲ್ಲ. ಆ ಮನುಷ್ಯನಿಗೆ ಮುಖ್ಯಮಂತ್ರಿ ಆಗಬೇಕೆಂಬ ಛಲವೇ ಇಲ್ಲದೆ ಕಾಂಗ್ರೆಸ್‌ ಪಕ್ಷವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ವಾಗ್ದಾಳಿ ನಡೆಸಿದರು.

ನಗರದ ಹೊರ ವಲಯದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಗಪ್ಪ, ಕಾಂಗ್ರೆಸ್‌ ಪಕ್ಷದಲ್ಲಿ ಉನ್ನತ ಸ್ಥಾನಗಳ ಅಧಿಕಾರ ಅನುಭವಿಸಿದ ಪರಮೇಶ್ವರ್‌, ಪಕ್ಷವನ್ನು, ನಮ್ಮನ್ನು ಹಾಗೂ ನಮ್ಮ ಹೆಂಡತಿ-ಮಕ್ಕಳನ್ನು ಸೋಲ್ಡ್‌ ಔಟ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಧ್ಯಕ್ಷ ಎನ್ನುವುದಕ್ಕೆ ನಾಚಿಕೆ:

ರಾಮನಗರ ಕ್ಷೇತ್ರ ಉಪಚುನಾವಣೆ ಕುರಿತ ಸಭೆಯಲ್ಲಿ ಪರಮೇಶ್ವರ್‌ ಅವರು ಕ್ಷೇತ್ರವನ್ನು ಜೆಡಿಎಸ್‌ ಬಿಟ್ಟು ಕೊಡುವ ಸಲಹೆ ನೀಡಿದ್ದಾರೆ. ರಾಮನಗರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಆಯಪ್ಪನಿಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯ ಕರ್ತರ ಅಭಿಪ್ರಾಯ ಕೇಳುವ ಸೌಜನ್ಯ ಕೂಡ ಇಲ್ಲ. ಈಗ ರಾಮನಗರ ಕ್ಷೇತ್ರವನ್ನೂ ಮಾರಾಟ ಮಾಡುತ್ತಿದ್ದಾರೆ. ಇವರನ್ನು ನಮ್ಮ ಅಧ್ಯಕ್ಷ ಅಂತಾ ಹೇಳೋಕೆ ನಾಚಿಕೆಯಾಗುತ್ತದೆ ಎಂದರು. ರಾಮನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದಾದರೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಗತಿ ಏನಾಗಬೇಕು. ಅದರ ಬದಲು ನಮಗೆಲ್ಲ ವಿಷ ಕೊಡಲಿ, ಇಡೀ ಕಾಂಗ್ರೆಸ್‌ ಸಮೂಹ ಸಾಯುತ್ತೇವೆ ಎಂದು ಹೇಳಿದರು.

ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿ, ‘ಬುದ್ಧಿ ಭೂ ಲೋಕ ಆಳಿದರೇ ಅದೃಷ್ಟಕತ್ತೆ ಕಾಯುತ್ತಿತ್ತು’ ಎಂಬ ಗಾದೆ ಮಾತಿನಂತೆ ಆಗಿದೆ. 78 ಸ್ಥಾನಗಳ ಪಡೆದ ಕಾಂಗ್ರೆಸ್‌ ನಾಯಕರು 37 ಸ್ಥಾನ ಪಡೆದ ಜೆಡಿಎಸ್‌ ಪಕ್ಷದ ದೇವೇಗೌಡರ ಮನೆ ಬಾಗಿಲಿಗೆ ಹೋಗಿ ಅಧಿಕಾರ ಕೊಟ್ಟು ಭಿಕ್ಷುಕರಾಗಿದ್ದಾರೆ. ಖಾತೆಗಳಿಗಾಗಿ ಅವರ ಮನೆ ಮುಂದೆ ನಿಲ್ಲುವಂತಾಗಿದೆ. ಇದು ಕಾಗ್ರೆಸ್‌ ಪಕ್ಷದ ಹಣೆ ಬರಹ ಎಂದು ಬೇಸರದಿಂದ ನುಡಿದರು.

ಕಾಂಗ್ರೆಸ್‌ ಉಳಿಸಿದ್ದು ಡಿಕೆಶಿ:  ಡಿ.ಕೆ.ಶಿವಕುಮಾರ್‌ ಇಲ್ಲದಿದ್ದರೆ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್‌ನ 20 ಶಾಸಕರು ಬಿಜೆಪಿ ಹೋಗಲು ಸಿದ್ಧರಿದ್ದರು. ಅದೆಲ್ಲವನ್ನು ತಪ್ಪಿಸಿದವರು  ಶಿವ ಕುಮಾರ್‌. ಆದರೆ ಇಂದು ಸ್ವಪಕ್ಷದಲ್ಲೇ ಅವರ ಹಿತಶತ್ರುಗಳು ಹೆಚ್ಚಾಗಿದ್ದಾರೆ ಎಂದು ಪರೋಕ್ಷವಾಗಿ ಪರಮೇಶ್ವರ್‌ ವಿರುದ್ಧ ಗುಡುಗಿದರು.

loader